....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಬಿಸಿಲು, ಉಷ್ಣ ಅಲೆ ನಡುವೆ ಅಕಾಲಿಕ ಮಳೆ: ಹಲವು ಕಡೆ ಅವಾಂತರ, ಹಾನಿ, ವೃದ್ಧೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಉಷ್ಣ ಅಲೆಯ ಸಂಕಷ್ಟದ ನಡುವೆ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಸುರಿದು ಅವಘಡ ಉಂಟಾಗಿದೆ. ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಮನೆಗಳು ಜಖಂಗೊಂಡಿದ್ದು, ಹಾಸನದಲ್ಲಿ ಸಿಡಿಲು ಬಡಿದು ವೃದ್ಧೆಯೊಬ್ಬರು ನಿನ್ನೆ ಸೋಮವಾರ ಮೃತಪಟ್ಟಿದ್ದಾರೆ.

ಸಿಡಿಲಿಗೆ ವೃದ್ಧೆ ಬಲಿ

ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹುಲಕುಂದ ಗ್ರಾಮದ ಎಸ್ಟೇಟ್ ಬಳಿ ಸಿಡಿಲು ಬಡಿದು ನೀಲಮ್ಮ ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮಳೆ ಬರುತ್ತಿದ್ದ ಕಾರಣ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿಗೆ ಕಾಲೇಜು ಮತ್ತು ಅಂಗಡಿಗಳ ಶೀಟ್​ಗಳು ಹಾರಿ ಹೋಗಿವೆ. ಮರದ ಕೊಂಬೆಗಳು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ.

ಮರ ಬಿದ್ದು ಮನೆಗಳಿಗೆ ಹಾನಿ

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯ ಗಾಳಿಗುಂಡಿಯಲ್ಲಿ ಬೃಹತ್ ಮರ ಬಿದ್ದು ಐದು ಮನೆಗಳ ಮೇಲ್ಚಾವಣಿ ಪುಡಿಯಾಗಿದೆ. ಕಳಸ ಪಟ್ಟಣದಲ್ಲಿ ಲಾಡ್ಜ್‌ ಒಂದರ ಮೇಲ್ಭಾಗದ ತಗಡಿನ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಮೂಡಿಗೆರೆ ತಾಲೂಕಿನ ಅಮ್ತಿ ಗ್ರಾಮದಲ್ಲಿ ಮರ ಬಿದ್ದು ಬಾಳೂರು-ಕಳಸ ಸಂಪರ್ಕ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೊಪ್ಪ ಮತ್ತು ಎನ್.ಆರ್.ಪುರ ಭಾಗದಲ್ಲಿಯೂ ಆಲಿಕಲ್ಲು ಮಳೆ ಆರ್ಭಟಿಸಿದೆ.

ಕೆರೆಯಂತಾದ ರಸ್ತೆಗಳು

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ದುರ್ಗಾ ಸರ್ಕಲ್ ಬಳಿ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.

ಒಟ್ಟಾರೆಯಾಗಿ, ಸುಡುವ ಬಿಸಿಲಿನ ನಡುವೆ ಬಂದ ಅಕಾಲಿಕ ಮಳೆ ತಂಪು ನೀಡುವ ಬದಲು ಆಸ್ತಿ-ಪಾಸ್ತಿ ಹಾನಿ ಮಾಡುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.

No Comments

Leave A Comment