.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಮೇಲೆ ಅತ್ಯಾಚಾರ; ಮಗುವಾಗಿರುವುದರಿಂದ ಮದ್ವೆಯಾಗುವುದೇ ಉತ್ತಮ: ಹೈಕೋರ್ಟ್

ಬೆಂಗಳೂರು: ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಗರ್ಭಿಣಿಯಾದ ಬಳಿಕ ವಂಚಿಸಿದ್ದ ಪ್ರಕರಣ ಭಾರೀ ಸದ್ದು ಮಾಡುತ್ತಿದೆ.

ಡಿಎನ್ಎ ಪರೀಕ್ಷೆಯ ವರದಿ ಲಭ್ಯವಾಗಿದ್ದು, ಬಿಜೆಪಿ ನಾಯಕ ಮತ್ತು ಪುತ್ತೂರು ನಗರ ಪುರಸಭೆ ಸದಸ್ಯ ಪಿಜಿ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ ಅವರೇ ಮಗುವಿನ ತಂದೆ ಎಂಬುದು ದೃಢಪಟ್ಟಿದೆ.

ಆದಾಗ್ಯೂ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದೆ.

ಯುವತಿ ಹಾಗೂ ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ. ಇಲ್ಲದಿದ್ದರೆ ಯುವತಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡಲು ಸಿದ್ದರಿದ್ದಾರಾ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಿ ಎಂದು ಹೇಳಿ ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.

ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ ಕೃಷ್ಣ ಜೆ.ರಾವ್ ಪರ ವಕೀಲ ಪಿ.ಪಿ.ಹೆಗ್ಡೆ ಅವರು, 7 ವರ್ಷಗಳ ಹಿಂದೆ ಪ್ರೀತಿ ಇತ್ತು. ಕ್ರಿಮಿನಲ್ ಕೇಸ್ ನಿಂದಾಗಿ ರಾಜಿಯಾಗಿಲ್ಲ. ರಾಜಕೀಯ ವಿರೋಧಿಗಳು ಆರೋಪಿ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್ ನಲ್ಲೂ ಆರೋಪಿಗಳನ್ನಾಗಿಸಿದ್ದಾರೆಂದು ವಾದಿಸಿದ್ದಾರೆ.

ಏನಿದು ಪ್ರಕರಣ?

ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಕೃಷ್ಣ ರಾವ್, ಮದುವೆಯಾಗುವುದಾಗಿ ಭರವಸೆ ನೀಡಿ ತನ್ನ ಮಾಜಿ ಸಹಪಾಠಿ ಮೇಲೆ ‘ಲೈಂಗಿಕ ದೌರ್ಜನ್ಯ’ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ ವರ್ಷ ಜೂನ್ 28 ರಂದು ಯುವತಿ ಮಗುವಿಗೆ ಜನ್ಮ ನೀಡಿದ್ದರು.

ಈ ಹಿಂದೆ ಗರ್ಭವತಿಯಾಗಿದ್ದ ಯುವತಿಯನ್ನು ಮದುವೆಯಾಗುವಂತೆ ಸಂಧಾನ ಮಾಡಿಸಲಾಗಿತ್ತು. ಆರಂಭದಲ್ಲಿ ಮದುವೆಯಾಗಲು ನಿರಾಕರಿಸಿದ್ದ ಆತ ಕೊನೆಗೆ ಒತ್ತಾಯದ ಮೇರೆಗೆ ಒಪ್ಪಿದ್ದ. ಆದರೆ, ಆತನಿಗೆ 21 ವರ್ಷ ವಯಸ್ಸು ಪೂರ್ಣವಾಗದ ಕಾರಣ, ನಂತರ ಮದುವೆ ಮಾಡುವುದಾಗಿ ಆತನ ತಂದೆ ಜಗನ್ನಿವಾಸ ರಾವ್ ಭರವಸೆ ನೀಡಿದ್ದರು. ಆದರೆ, ಮಗು ಜನಿಸುತ್ತಿದ್ದಂತೆಯೇ ಕೃಷ್ಣ ರಾವ್ (ಆಗ ಆತನಿಗೆ 21 ವರ್ಷ ವಯಸ್ಸು ಪೂರ್ಣಗೊಂಡಿತ್ತು) ಮದುವೆಗೆ ನಿರಾಕರಿಸಿದ್ದ. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಬಂಧನಕ್ಕೊಳಗಾಗಿದ್ದ ಕೃಷ್ಣ ರಾವ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಯುವತಿಗೆ ಹೆರಿಗೆಯಾದ ನಂತರ ‘ಮಗು ನನ್ನದಲ್ಲ’ ಎಂದು ಕೃಷ್ಣ ರಾವ್ ಹೇಳಿದ್ದರಿಂದ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು. ಆದ್ರೆ, ಆರೋಪಿ ಮಾತ್ರ ಮದುವೆಯಾಗಲು ಒಪ್ಪುತ್ತಿಲ್ಲ. ಅಲ್ಲದೆ ಪ್ರಮುಖ ಬಿಜೆಪಿ ನಾಯಕರ ಸಂಧಾನ ಸಹ ವಿಫಲವಾಗಿದೆ.

No Comments

Leave A Comment