ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಅಮೆರಿಕದ ಸಮುದ್ರದಲ್ಲಿ ವಿಮಾನ ದುರಂತ, ಇಬ್ಬರು ಬಾಲಕರು ಸೇರಿ ಆರು ಮಂದಿ ಸಾವು

ವಾಷಿಂಗ್ಟನ್, ನವೆಂಬರ್ 25: ಅಮೆರಿಕದ ಮಿಸ್ಸಿಸ್ಸಿಪ್ಪಿ ಕರಾವಳಿಯ ಹಾರ್ನ್ ದ್ವೀಪದ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ನವೆಂಬರ್ 24ರಂದು ಸಮುದ್ರಕ್ಕೆ ಪತನಗೊಂಡ ಸೆಸ್ನಾ 210 ವಿಮಾನದಲ್ಲಿದ್ದ ನಾಲ್ವರು ವಯಸ್ಕರು ಮತ್ತು 8 ಹಾಗೂ 10 ವರ್ಷದ ಇಬ್ಬರು ಬಾಲಕರು ಮೃತಪಟ್ಟಿರುವುದನ್ನು ರಕ್ಷಣಾ ತಂಡಗಳು ಪತ್ತೆಹಚ್ಚಿವೆ. ಆರಂಭದಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಶೋಧ ಕಾರ್ಯಾಚರಣೆ ವೇಳೆ ವಿಮಾನದ ಅವಶೇಷಗಳೊಳಗೆ ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿವೆ.

ನ್ಯೂ ಓರ್ಲಿಯನ್ಸ್‌ನಿಂದ ಫ್ಲೋರಿಡಾಕ್ಕೆ ಹೊರಟಿದ್ದ ವಿಮಾನ

ನವೆಂಬರ್ 24ರಂದು ಮಂಗಳವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಮಿಸ್ಸಿಸ್ಸಿಪ್ಪಿಯ ಪಾಸ್ಕಗೌಲಾ ಪ್ರದೇಶದ ಬಳಿ ವಿಮಾನ ಪತನಗೊಂಡಿದೆ. ಇದು ನ್ಯೂ ಓರ್ಲಿಯನ್ಸ್‌ನ ಲೇಕ್‌ಫ್ರಂಟ್ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಫೋರ್ಟ್ ಮೈಯರ್ಸ್‌ನ ಪೇಜ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ವಿಮಾನವು ಹಾರ್ನ್ ದ್ವೀಪದಿಂದ ಸುಮಾರು ಎರಡು ಮೈಲಿ ಈಶಾನ್ಯ ಭಾಗದಲ್ಲಿ ಸಮುದ್ರಕ್ಕೆ ಬಿದ್ದಿದೆ. ವಿಮಾನದಲ್ಲಿದ್ದವರ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಅಮೆರಿಕದ ಕರಾವಳಿ ರಕ್ಷಣಾ ಪಡೆ ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿತು.

ನಿಮಿಷಕ್ಕೆ 10 ಸಾವಿರ ಅಡಿ ವೇಗದಲ್ಲಿ ಕೆಳಕ್ಕೆ ಕುಸಿತ

ಅಪಘಾತಕ್ಕೂ ಮುನ್ನ ವಿಮಾನವು ಅಸಾಮಾನ್ಯ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನೀಡಿದ ಮಾಹಿತಿಯ ಪ್ರಕಾರ, ವಿಮಾನವು ನಿಮಿಷಕ್ಕೆ ಸುಮಾರು 10,000 ಅಡಿ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿತ್ತು. ಮಧ್ಯಾಹ್ನ 3.45ರ ಸುಮಾರಿಗೆ ವಿಮಾನದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ವಿಮಾನ ಏಕೆ ಇಷ್ಟು ವೇಗವಾಗಿ ಕೆಳಕ್ಕೆ ಇಳಿಯಿತು ಮತ್ತು ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಸಮುದ್ರದಲ್ಲಿ ಪತ್ತೆಯಾದ ವಿಮಾನದ ಅವಶೇಷಗಳು

ಶೋಧ ಕಾರ್ಯಾಚರಣೆ ವೇಳೆ ಕರಾವಳಿ ರಕ್ಷಣಾ ಪಡೆಗೆ ವಿಮಾನದ ಕ್ಯಾಬಿನ್, ಒಂದು ಲೈಫ್ ರಾಫ್ಟ್ ಮತ್ತು ಮೂರು ಲೈಫ್ ಜಾಕೆಟ್‌ಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಪ್ರಯಾಣಿಕರ ಸುಳಿವು ಸಿಕ್ಕಿರಲಿಲ್ಲ. ನಂತರ ರಕ್ಷಣಾ ತಂಡಗಳು ಮತ್ತು ಮುಳುಗು ತಜ್ಞರು ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ ವಿಮಾನದ ಅವಶೇಷಗಳೊಳಗೆ ಆರು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಈ ಮೂಲಕ ನಾಪತ್ತೆಯಾಗಿದ್ದ ಎಲ್ಲ ಆರು ಪ್ರಯಾಣಿಕರ ಸಾವಿನ ಬಗ್ಗೆ ದೃಢಪಟ್ಟಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

No Comments

Leave A Comment