ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ವಾರಣಾಸಿಯಲ್ಲಿ ವಿಚಿತ್ರ ಕ್ರೌರ್ಯ; ಅರೆ ಬೆತ್ತಲಾಗಿ ಮನೆಗಳಿಗೆ ನುಗ್ಗಿ, ಜನರಿಗೆ ಕಚ್ಚಿದ ವಿದೇಶಿ ಪ್ರಜೆ!
ವಾರಣಾಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿದೇಶಿಯರ ದಾಂಧಲೆ ಹೆಚ್ಚಾಗುತ್ತಿದ್ದು, ವಿದೇಶಿ ಪ್ರಜೆಯೊಬ್ಬ ಅರೆ ಬೆತ್ತಲಾಗಿ ಹಲವಾರು ಮನೆಗಳಿಗೆ ನುಗ್ಗಿ, ಮನೆಯ ವಸ್ತುಗಳನ್ನು ಎಸೆದು, ಹಲವು ಜನರಿಗೆ ಕಚ್ಚಿದ್ದು, ನಿವಾಸಿಗಳಲ್ಲಿ ಭೀತಿ ಸೃಷ್ಟಿಸಿದ ಘಟನೆ ನಡೆದಿದೆ.
ವಾರಣಾಸಿಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಪ್ತಸಾಗರ ಔಷಧ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಈ ವಿಚಿತ್ರ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ವಿದೇಶಿ ಪ್ರಜೆ ಹುಚ್ಚನಂತೆ ಜನರ ಮುಂದೆ ನಿಂತು ಬಾಯಿಗೆ ಬಂದಂತೆ ಮಾತನಾಡುವುದನ್ನು ಕಾಣಬಹುದು.
ಮನೆಗಳಿಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ ವಿದೇಶಿಗ, ಸ್ಥಳೀಯ ನಿವಾಸಿಯೊಬ್ಬರ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಆತ ಮಾದಕವಸ್ತು ಪ್ರಭಾವದಲ್ಲಿ ಈ ರೀತಿ ಮಾಡಿರಬಹುದು ಎಂದು ಹೇಳಲಾಗಿದೆ.
ಪೊಲೀಸರು ವಿದೇಶಿ ಪ್ರಜೆಯನ್ನು ಬಂಧಿಸಿದ್ದು, ಆತನ ಮೇಲೆ ಭಾಂಗ್ ಎಂಬ ಮಾದಕ ವಸ್ತು ಪ್ರಭಾವ ಬೀರಿದೆ ಎಂದು ಕೆಲವು ವರದಿಗಳು ಹೇಳಿದ್ದರೂ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ.
ಸ್ಥಳೀಯರ ಪ್ರಕಾರ, ಈ ವಿದೇಶಿ ಪ್ರಜೆ ಮೊದಲು ರಸ್ತೆಯಲ್ಲಿ ವಿಚಿತ್ರವಾಗಿ ಓಡಾಡಿದ್ದಾನೆ. ನಂತರ ವಸತಿ ಕಟ್ಟಡವೊಂದರ ಮೇಲಿನ ಮಹಡಿಗೆ ನುಗ್ಗಿ ಅಲ್ಲಿನ ವಸ್ತುಗಳನ್ನು ಮನಬಂದಂತೆ ಹೊರಗೆ ಎಸೆಯಲು ಆರಂಭಿಸಿದ್ದಾನೆ. ಸ್ಥಳೀಯರು ಆತನನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ, ಆತ ಮತ್ತಷ್ಟು ಆಕ್ರೋಶಗೊಂಡು ಜನರ ಮೇಲೆ ದಾಳಿ ಮಾಡಿದ್ದಾನೆ. ಈ ಗದ್ದಲದ ನಡುವೆ ಆತ ನಿವಾಸಿಯೊಬ್ಬರ ಕೈಗೆ ಬಲವಾಗಿ ಕಚ್ಚಿದ್ದಾನೆ ಹಾಗೂ ಕಿರಿದಾದ ಹಾದಿಗಳಲ್ಲಿ ಸಾರ್ವಜನಿಕರನ್ನು ಬೆನ್ನಟ್ಟಿ ಭೀತಿ ಹುಟ್ಟಿಸಿದ್ದಾನೆ.
ವಿಷಯ ತಿಳಿದು ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನಿಗೆ ಕೆಳಗಿಳಿಯುವಂತೆ ಮನವೊಲಿಸಲು ಯತ್ನಿಸಿದಾಗ, ಆತ ಪೊಲೀಸರ ಮೇಲೆಯೇ ತಿರುಗಿಬಿದ್ದು ‘ಹಿಂತಿರುಗಿ ಹೋಗಿ’ ಎಂದು ಜೋರಾಗಿ ಕಿರುಚಾಡಿದ್ದಾನೆ. ಕೊನೆಗೆ ಸ್ಥಳೀಯರು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.