ಆಗುಂಬೆ ಘಾಟಿ: ಸೆ.30ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ...ಉಡುಪಿಯ ಬಡಗುಪೇಟೆಯಲ್ಲಿನ ಪ್ರಸಿದ್ಧ ಬಟ್ಟೆಮಳಿಗೆ "ಗಿರಿಜಾ ಸಿಲ್ಕ್ "ನಲ್ಲಿ ಜೂನ್ 15ರಿ೦ದ ಗ್ರಾಹಕರಿಗಾಗಿ ಭಾರೀ ರಿಯಾಯಿತಿ ದರದಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಬಟ್ಟೆಗಳ ಮಾರಾಟ ಆರ೦ಭ-ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವು ತೆರೆದಿದೆ. ತಕ್ಷಣವೇ ಭೇಟಿ ನೀಡಿ ಬಟ್ಟೆಗಳನ್ನು ಖರೀದಿಸಿ.ಎಲ್ಲಾ ಬಟ್ಟೆಗಳು ಹೊಸ ಸ್ಟಾಕ್....

Kishtwar ನಲ್ಲಿ ಭಾರೀ ಮಳೆ; ಕ್ವಾರ್ ಜಲವಿದ್ಯುತ್ ಯೋಜನೆ ಬಳಿ ಭೀಕರ ಭೂಕುಸಿತ

ಶ್ರೀನಗರ: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸೋಮವಾರ ಸುರಿದ ಭಾರೀ ಮಳೆ ಪರಿಣಾಮ ನಿರ್ಮಾಣ ಹಂತದ 540 ಮೆಗಾವ್ಯಾಟ್ ಕ್ವಾರ್ ಜಲವಿದ್ಯುತ್ ಯೋಜನೆ ಘಟಕದ ಸಮೀಪ ಭಾರಿ ಭೂಕುಸಿತ ಸಂಭವಿಸಿದೆ.

ಪರಿಣಾಮ ಮಣ್ಣು, ಬಂಡೆಗಳು ಹಾಗೂ ಅವಶೇಷಗಳಡಿ ಹಲವು ವಾಹನಗಳು ಸಿಲುಕಿಕೊಂಡಿವೆ. ಚೆನಾಬ್ ನದಿಯ ಮೇಲೆ ನಿರ್ಮಾಣವಾಗುತ್ತಿರುವ ಕ್ವಾರ್ ಜಲವಿದ್ಯುತ್ ಯೋಜನೆಯನ್ನು ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಲಿಮಿಟೆಡ್ (CVPPL) ಅಭಿವೃದ್ಧಿಪಡಿಸುತ್ತಿದೆ.

ಯೋಜನಾ ಸ್ಥಳದ ಸಮೀಪ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಹಾಗೂ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವಾರು ವಾಹನಗಳು ಭೂಕುಸಿತದಿಂದ ರಸ್ತೆಯ ಮೇಲೆ ಹರಿದು ಬಂದ ಮಣ್ಣು, ಬಂಡೆಗಳು ಮತ್ತು ಅವಶೇಷಗಳಡಿ ಹೂತುಹೋಗಿವೆ. ಭೂಕುಸಿತದಿಂದ ರಸ್ತೆಯ ಬಹುಭಾಗ ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ರಸ್ತೆಗೂ ಹಾನಿಯಾಗಿದೆ.

ಸದ್ಯಕ್ಕೆ ಯಾವುದೇ ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಿ ರಸ್ತೆ ಸಂಚಾರವನ್ನು ಪುನಃ ಆರಂಭಿಸಲು ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದೆ. ಭಾರೀ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಿ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಅವಶೇಷಗಳಡಿ ಸಿಲುಕಿರುವ ವಾಹನಗಳನ್ನು ಹೊರತೆಗೆದು ರಕ್ಷಿಸುವ ಕಾರ್ಯವೂ ಪ್ರಗತಿಯಲ್ಲಿದೆ.

ಅಧಿಕಾರಿಗಳ ಪ್ರಕಾರ, ಭೂಕುಸಿತದಿಂದ ಜಲವಿದ್ಯುತ್ ಯೋಜನೆಯ ನಿರ್ಮಾಣ ಉಪಕರಣಗಳು ಅಥವಾ ಮೂಲಸೌಕರ್ಯಕ್ಕೆ ಯಾವುದೇ ಹಾನಿಯಾಗಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದರ ನಡುವೆ, ಭಾರೀ ಮಳೆಯಿಂದ ಪ್ರೇಮ್ ನಗರ ಪ್ರದೇಶದಲ್ಲಿ ಆಕಸ್ಮಿಕ ಪ್ರವಾಹ ಹಾಗೂ ಮಣ್ಣಿನ ಕುಸಿತ ಸಂಭವಿಸಿದ ಪರಿಣಾಮ ಕಿಶ್ತ್ವಾರ್–ದೋಡಾ ಹೆದ್ದಾರಿ ಕೂಡ ಬಂದ್ ಆಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆ ತೆರವು ಹಾಗೂ ಪುನರ್ ಸ್ಥಾಪನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಕೇಂದ್ರ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಹಾಗೂ ಸ್ಥಳೀಯ ಸಂಸದ ಡಾ. ಜಿತೇಂದ್ರ ಸಿಂಗ್, ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ನಿರ್ಮಾಣ ಹಂತದಲ್ಲಿರುವ 540 ಮೆಗಾವ್ಯಾಟ್ ಕ್ವಾರ್ ಜಲವಿದ್ಯುತ್ ಯೋಜನೆ ಆವರಣಕ್ಕೆ ಪ್ರವಾಹದ ನೀರು ನುಗ್ಗಿದ ಮಾಹಿತಿ ತಿಳಿದ ತಕ್ಷಣ ಜಮ್ಮು ವಿಭಾಗದ ಆಯುಕ್ತ ರಮೇಶ್ ಕುಮಾರ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

“ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ನಷ್ಟವಾಗಿಲ್ಲ. ಯೋಜನೆಗೆ ಸಂಬಂಧಿಸಿದ ಕೆಲವು ಯಂತ್ರೋಪಕರಣಗಳನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಒಟ್ಟಾರೆ, ನಿರ್ಮಾಣ ಹಂತದಲ್ಲಿರುವ ಯೋಜನೆಯ ಯಾವುದೇ ಭಾಗಕ್ಕೂ ಹಾನಿಯಾಗಿಲ್ಲ. ಎಲ್ಲ ಮೂಲಸೌಕರ್ಯಗಳು ಸುರಕ್ಷಿತವಾಗಿವೆ ಎಂದು ಅವರು ಹೇಳಿದ್ದಾರೆ.

ಮಳೆ ಮುಂದುವರಿಕೆ: ಹವಾಮಾನ ಇಲಾಖೆ

ಚೆನಾಬ್ ಕಣಿವೆ ಸೇರಿದಂತೆ ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಸಂದರ್ಭದಲ್ಲೇ ಈ ಭೂಕುಸಿತ ಸಂಭವಿಸಿದೆ. ಅಂತೆಯೇ ಮಳೆ ಮುಂದುವರಿಕೆ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜುಲೈ 6ರಿಂದ 8ರವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ.

ಹಲವೆಡೆ ಸಣ್ಣದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಜಮ್ಮು ಪ್ರದೇಶದ ಕೆಲವೆಡೆ ಮಧ್ಯಾಹ್ನ, ಸಂಜೆ ಹಾಗೂ ತಡರಾತ್ರಿ ಅಥವಾ ಮುಂಜಾನೆ ವೇಳೆ ಭಾರೀ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಜುಲೈ 6ರಿಂದ 8ರವರೆಗೆ ಕೆಲ ಪ್ರದೇಶಗಳಲ್ಲಿ ತೀವ್ರ ಸ್ವರೂಪದ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ, ವಿಶೇಷವಾಗಿ ಚೆನಾಬ್ ಕಣಿವೆ ಹಾಗೂ ಪೀರ್ ಪಂಜಾಲ್ ಪರ್ವತ ಶ್ರೇಣಿಯ ಭೂಕುಸಿತ ಮತ್ತು ಮಣ್ಣಿನ ಕುಸಿತ ಸಂಭವಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಕಸ್ಮಿಕ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಜನರು ಹೊಳೆಗಳು, ನದಿಪಾತ್ರಗಳು ಹಾಗೂ ಭೂಕುಸಿತ ಮತ್ತು ಮಣ್ಣಿನ ಕುಸಿತಕ್ಕೆ ಒಳಗಾಗುವ ಪ್ರದೇಶಗಳಿಂದ ದೂರವಿರಬೇಕು ಎಂದು ಹವಾಮಾನ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

No Comments

Leave A Comment