ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ಉಡುಪಿ: ಶಿರ್ವ ಗೋಹತ್ಯೆ ಪ್ರಕರಣ; ಓರ್ವ ಆರೋಪಿಯ ಬಂಧನ
ಶಿರ್ವ:ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಎಂಬಲ್ಲಿನ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿರ್ವ ಗ್ರಾಮದ ಕಾಪು ತಾಲೂಕಿನ ಬಾಬು ಸ್ವಾಮಿ ದೈವಸ್ಥಾನದ ಸಮೀಪದ ಪದವಿನ ನಿವಾಸಿ ಅಶೋಕ್ (52) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಜೂನ್ 1 ರಂದು ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆಯ ಕೆಳಗಿನ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಮರಬದ ಅವರು ಕಾಪು ಪಶು ಆಸ್ಪತ್ರೆಯ ಅಧಿಕಾರಿಗಳು ಮತ್ತು ಜಿಲ್ಲಾ ಅಪರಾಧ ತನಿಖಾ ದಳದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಜರು ಪ್ರಕ್ರಿಯೆಯ ಸಮಯದಲ್ಲಿ, ಸ್ಥಳದಲ್ಲಿ ಜಾನುವಾರಿನ ಮೇಲ್ಭಾಗದ ದವಡೆ, ಎರಡು ಗೊರಸುಗಳು, ಮಾಂಸ ಮತ್ತು ಆಂತರಿಕ ಅಂಗಗಳನ್ನು ಪೊಲೀಸರು ವಶಪಡಿಸಿಕೊಂಡರು. ಈ ಆಧಾರದ ಮೇಲೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು. ತನಿಖೆಯ ಭಾಗವಾಗಿ ಆರೋಪಿ ಅಶೋಕ್‌ನನ್ನು ಗುರುತಿಸಿದ ಪೊಲೀಸರು, ಜೂನ್ 5, ಶುಕ್ರವಾರದಂದು ಶಿರ್ವದ ಪದವಿನಲ್ಲಿ ಆತನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯ ವೇಳೆ, ಆರೋಪಿಯ ವಶದಲ್ಲಿದ್ದ ಜಾನುವಾರಿನ ಚರ್ಮ ಮತ್ತು ಕೃತ್ಯಕ್ಕೆ ಬಳಸಲಾಗಿದೆ ಎಂದು ಶಂಕಿಸಲಾದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧನದ ನಂತರ, ಆರೋಪಿ ಅಶೋಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಡಿವೈಎಸ್ಪಿ ವಿಜಯ್ ಪ್ರಸಾದ್ ಮತ್ತು ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ತನಿಖಾ ತಂಡದಲ್ಲಿ ಶಿರ್ವ ಪಿಎಸ್‌ಐ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್., ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಅಡಿಗ, ಕಿರಣ್, ಯಲ್ಲಲಿಂಗ, ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ರಘು ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಹೀಮ್ ಮತ್ತು ಸಂದೇಶ್ ಇದ್ದರು.