.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ
ಬೆಂಗಳೂರು: ಕನ್ನಡ ಸಿನಿಮಾ ನಿರ್ದೇಶಕರೊಬ್ಬರನ್ನು ಅಪಹರಿಸಿ, ಹಲ್ಲೆ ಮಾಡಿ, ಚಿನ್ನಾಭರಣ ಮತ್ತು ನಗದು ದೋಚಿರುವ ಆರೋಪದ ಮೇಲೆ ನಟಿ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಫೆಬ್ರವರಿ 11 ರಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ನಿರ್ದೇಶಕರ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವಿಯೂ ಆಗಿರುವ ಮತ್ತು ಭೀಮಾ ಚಿತ್ರದಲ್ಲಿ ಅಭಿನಯಿಸಿದ್ದ ಐಶ್ವರ್ಯ ಎಂಬ ನಟಿಯೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇನ್ನೂ ಬಿಡುಗಡೆಯಾಗದ ‘ಜೀವನದ ಭಾಷೆ’ ಎಂಬ ಹೊಸ ಚಿತ್ರವನ್ನು ನಿರ್ದೇಶಿಸಿರುವ ಟಿಎ ಅನೀಶ್ ಅವರನ್ನು ಅಪಹರಣ ಮಾಡಲಾಗಿತ್ತು. ಇವರು ತಮ್ಮ ಕಾರು ಮಾರಾಟ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಇಂದಿರಾನಗರ ಬಳಿ ನೆಲೆಸಿರುವ ಸ್ನೇಹಿತೆ ಹಾಗೂ ನಟಿ ಐಶ್ವರ್ಯ ಅವರಿಗೆ ಮಾಹಿತಿ ನೀಡಿದ್ದರು. ನಂತರ ಆ ನಟಿಯಿಂದ ಅಪಹರಣಕಾರರು ಮಾಹಿತಿ ಪಡೆದುಕೊಂಡಿದ್ದರು.
ನಂತರ ಆರೋಪಿಗಳು ವಾಹನ ಮಾರಾಟ ಮಾಡಲು ಸಹಾಯ ಮಾಡುವುದಾಗಿ ದೂರುದಾರ ನಿರ್ದೇಶಕರಿಗೆ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಫೆಬ್ರವರಿ 9 ರಂದು ಮುಂಬೈನಲ್ಲಿದ್ದ ನಿರ್ದೇಶಕನನ್ನ ಪ್ಲ್ಯಾನ್ ಮಾಡಿ ಕಿಡ್ನ್ಯಾಪರ್ಸ್ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬಳಿಕ ನಿರ್ದೇಶಕನನ್ನ ಅಪಹರಿಸಿ ಬ್ಯಾಡರಹಳ್ಳಿಯ ಮನೆಯೊಂದಕ್ಕೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಹಾಕಿ ಸ್ಟಿಕ್, ಇನ್ನಿತರ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ ಮತ್ತು ಅವರು ಧರಿಸಿದ್ದ ಚಿನ್ನಾಭರಣ ಹಾಗೂ 30,000 ರೂ.ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ, ಅವರನ್ನು ಕಾರಿನಲ್ಲಿ ತುಮಕೂರು ಜಿಲ್ಲೆಯ ಪಂಡಿತನಹಳ್ಳಿ ಬಳಿಯ ಮಂದಾರಗಿರಿ ಬೆಟ್ಟಕ್ಕೆ ಕರೆದೊಯ್ದ, ಅಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಮತ್ತೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನ ಆಧಾರದ ಮೇಲೆ, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಹಲ್ಲೆ ಪ್ರಕರಣ ದಾಖಲಾಗಿದ್ದು, ಒಬ್ಬ ಮಹಿಳೆ ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳಿಂದ ಅಪರಾಧಕ್ಕೆ ಬಳಸಲಾದ ಆರು ಮೊಬೈಲ್ ಫೋನ್‌ಗಳು, ಚಿನ್ನಾಭರಣಗಳು, ಒಂದು ಕಾರು ಮತ್ತು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.