ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
ಕುವೈತ್‌ನಲ್ಲಿ ಕೈಕೊಟ್ಟ ಗುಲಾಂ ನಬಿ ಆಜಾದ್ ಆರೋಗ್ಯ, ಆಸ್ಪತ್ರೆಗೆ ದಾಖಲು
ಕುವೈತ್: ಮೇ 28: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಆರೋಗ್ಯದಲ್ಲಿ ಏರುಪೇರಾಗಿದೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಜತೆ ಆಜಾದ್ ಕುವೈತ್ಗೆ ತೆರಳಿದ್ದರು. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನದ ಬಣ್ಣವನ್ನು ಜಗತ್ತಿನ ಮುಂದೆ ಬಯಲು ಮಾಡಲು ಗಲ್ಫ್ಟ್ ರಾಷ್ಟ್ರಗಳಿಗೆ ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಆಯೋಗ ಭೇಟಿ ನೀಡುತ್ತಿದೆ. ಕುವೈತ್‌ನಲ್ಲಿ ಆಜಾದ್ ಅವರ ಆರೋಗ್ಯ ಕೈಕೊಟ್ಟಿದ್ದು,ಈಗ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಸಂಸದ ಪಾಂಡಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಂಸದ ಬೈಜಯಂತ್ ಜೈ ಪಾಂಡಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಮ್ಮ ನಿಯೋಗದ ಪ್ರವಾಸದ ಅರ್ಧದಾರಿಯಲ್ಲೇ ಗುಲಾಂ ನಬಿ ಆಜಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಹೇಳಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ, ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಅವರಿಗೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು. ಇದರೊಂದಿಗೆ, ಬಹ್ರೇನ್ ಮತ್ತು ಕುವೈತ್‌ನಲ್ಲಿ ನಡೆದ ಸಭೆಗಳಲ್ಲಿ ಅವರ ಕೊಡುಗೆ ಅತ್ಯಂತ ಪ್ರಭಾವಶಾಲಿಯಾಗಿತ್ತು. ಸೌದಿ ಅರೇಬಿಯಾ ಮತ್ತು ಅಲ್ಜೀರಿಯಾದಲ್ಲಿ ಅವರ ಅನುಪಸ್ಥಿತಿ ಬೇಸರವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಕೃತಜ್ಞತೆ ಸಲ್ಲಿಸಿದ ಗುಲಾಂ ನಬಿ ಆಜಾದ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುವ ಗುಲಾಂ ನಬಿ ಆಜಾದ್, ಕುವೈತ್‌ನಲ್ಲಿನ ತೀವ್ರ ಶಾಖದಿಂದಾಗಿ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರೂ, ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ಎಲ್ಲಾ ಪರೀಕ್ಷೆಗಳ ಫಲಿತಾಂಶಗಳು ಸಾಮಾನ್ಯವಾಗಿವೆ. ನಿಮ್ಮ ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ನಿಯೋಗದಲ್ಲಿ ಯಾರ್ಯಾರಿದ್ದಾರೆ? ಬೈಜಯಂತ್ ಪಾಂಡಾ ನೇತೃತ್ವದ ನಿಯೋಗದಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಬಿಜೆಪಿ ಸಂಸದ ಫಾಂಗ್ನೋನ್ ಕೊನ್ಯಾಕ್, ಬಿಜೆಪಿ ಸಂಸದೆ ರೇಖಾ ಶರ್ಮಾ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸದ ಅಸಾದುದ್ದೀನ್ ಓವೈಸಿ, ಬಿಜೆಪಿ ಸಂಸದ ಸತ್ನಮ್ ಸಿಂಗ್ ಸಂಧು ಮತ್ತು ಭಾರತೀಯ ರಾಜತಾಂತ್ರಿಕ ಹರ್ಷ್ ಶ್ರಿಂಗ್ಲಾ ಇದ್ದಾರೆ.
ಪಾಂಡಾ ಮತ್ತು 76 ವರ್ಷದ ಆಜಾದ್ ಭಾರತವು ವಿವಿಧ ದೇಶಗಳಿಗೆ ಕಳುಹಿಸಿದ ಏಳು ಬಹು-ಪಕ್ಷ ನಿಯೋಗಗಳಲ್ಲಿ ಒಂದರ ಭಾಗವಾಗಿದ್ದಾರೆ. ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸುವುದು ಈ ನಿಯೋಗಗಳ ಕೆಲಸ.
ಆಜಾದ್ ಆರೋಗ್ಯದ ಬಗ್ಗೆ ಕಾಂಗ್ರೆಸ್ ಕಳವಳ ಆಜಾದ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಪಾಕಿಸ್ತಾನಿ ಭಯೋತ್ಪಾದನೆಯ ವಿರುದ್ಧ ಭಾರತದ ಕಾರ್ಯತಂತ್ರವನ್ನು ಬಲಪಡಿಸಲು ಕಳುಹಿಸಲಾದ ಉನ್ನತ ಮಟ್ಟದ ನಿಯೋಗದ ಸದಸ್ಯರಲ್ಲಿ ಒಬ್ಬರು ಕುವೈತ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಆತಂಕವಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಆಜಾದ್ ದೀರ್ಘಕಾಲ ಕಾಂಗ್ರೆಸ್‌ನಲ್ಲಿದ್ದರು ಮತ್ತು 2022 ರಲ್ಲಿ ಅವರು ಕಾಂಗ್ರೆಸ್ ತೊರೆದು ತಮ್ಮದೇ ಆದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷವನ್ನು ಸ್ಥಾಪಿಸಿದರು ಎಂದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು 26 ಮಂದಿಯನ್ನು ಹತ್ಯೆಗೈದಿದ್ದರು. ಅದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳನ್ನು ನಾಶಪಡಿಸಿತು.