ಸಕ್ರಿಯ ರಾಜಕಾರಣಕ್ಕೆ ಶೇಖ್ ಹಸೀನಾ ಮರಳುವ ಸುಳಿವು ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ: ನೂರಕ್ಕೂ ಹೆಚ್ಚು ಕಚ್ಚಾ ಬಾಂಬ್ ಸ್ಫೋಟ
ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ದೇಶಾದ್ಯಂತ 100ಕ್ಕೂ ಹೆಚ್ಚು ಕಚ್ಚಾ ಬಾಂಬ್ (ಕಾಕ್‌ಟೇಲ್ ಬಾಂಬ್) ಸ್ಫೋಟಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಿಷೇಧಿತ ವಿದ್ಯಾರ್ಥಿ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಕರೆ ನೀಡಿದ್ದ ದೇಶಾದ್ಯಂತ ಬಂದ್ ಹಿನ್ನೆಲೆಯಲ್ಲಿ ಈ ಹಿಂಸಾಚಾರ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:
ನೂರಕ್ಕೂ ಹೆಚ್ಚು ಕಚ್ಚಾ ಬಾಂಬ್ ಸ್ಫೋಟ…
ಕಳೆದ ಮೂರು ದಿನಗಳಿಂದ ಢಾಕಾ ವಿಶ್ವವಿದ್ಯಾಲಯದ ಆವರಣ, ನ್ಯಾಯಾಲಯದ ಆವರಣ ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳ ಸುತ್ತಮುತ್ತ ಸರಣಿ ಕಚ್ಚಾ ಬಾಂಬ್ ಸ್ಫೋಟಗಳನ್ನು ನಡೆಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಢಾಕಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಬಾಂಬ್ ದಾಳಿಗಳು ನಡೆದಿವೆ. ಇದರೊಂದಿಗೆ, ಪ್ರತಿಭಟನಾಕಾರರು ಸಾರ್ವಜನಿಕ ಸಾರಿಗೆ ಬಸ್‌ಗಳು, ಸರ್ಕಾರಿ ವಾಹನಗಳು ಹಾಗೂ ಮೋಟಾರ್ ಸೈಕಲ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಫರೀದ್‌ಪುರದಲ್ಲಿ ನಿಲ್ಲಿಸಿದ್ದ ಬಸ್‌ಗೆ ಬೆಂಕಿ ಹಚ್ಚಿದ ಪರಿಣಾಮ ಹೊಗೆಯಿಂದ ಉಸಿರುಗಟ್ಟಿ 60 ವರ್ಷದ ಬಸ್ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ.