ಉಡುಪಿ: ನ.3ರಿಂದ ನ.7 ರವರೆಗೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ – ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ....ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗಿರುವ ಉದ್ಯೋಗಾವಕಾಶ ಮೌಲ್ಯಮಾಪನಕ್ಕೆ ಕರವೇ ಅಭಿಯಾನ.....

ನ.29ರಂದು ಸೋದೆ ಮಠದ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತ; ಉಡುಪಿಯಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ

ಉಡುಪಿ: ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ 2028–30ನೇ ಸಾಲಿನ ಎರಡನೇ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ ನವೆಂಬರ್ 29ರಂದು ಬಾಳೆ ಮುಹೂರ್ತ ನೆರವೇರಲಿದೆ.

ಇದೇ ಸಂದರ್ಭದಲ್ಲಿ ಬಾಳೆ ಕೃಷಿಯ ಮಹತ್ವ, ವೈವಿಧ್ಯಮಯ ತಳಿಗಳು, ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪರಿಚಯಿಸುವ ಉದ್ದೇಶದಿಂದ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಉಡುಪಿಯಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ ಆಯೋಜಿಸಲಾಗಿದೆ.

ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ನಡೆಯಲಿರುವ ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ರೈತರು, ಕೃಷಿ ತಜ್ಞರು, ಸಂಶೋಧಕರು ಹಾಗೂ ಕೃಷಿ ಉದ್ಯಮಿಗಳು ಭಾಗವಹಿಸಲಿದ್ದಾರೆ.

ಸುಮಾರು 2,000 ರೈತರು, 2,000 ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯಮಿಗಳು ಸೇರಿದಂತೆ 10 ಸಾವಿರಕ್ಕೂ ಅಧಿಕ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.

ಉಡುಪಿಯ ಸೋದೆ ಶ್ರೀ ವಾದಿರಾಜ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೇಳದ ಉದ್ದೇಶ ಮತ್ತು ಕಾರ್ಯಕ್ರಮಗಳ ವಿವರ ನೀಡಿದ ಅವರು, ಉಡುಪಿಯ ಅಷ್ಟಮಠಗಳ ಪರ್ಯಾಯ ಪರಂಪರೆಗೆ ಶ್ರೀ ವಾದಿರಾಜತೀರ್ಥ ಶ್ರೀಪಾದರು ವಿಶಿಷ್ಟ ರೂಪುರೇಷೆಗಳನ್ನು ನೀಡಿದ್ದರು.

ಈ ಪರಂಪರೆಯಲ್ಲಿ ಬಾಳೆ ಮುಹೂರ್ತವು ಧಾರ್ಮಿಕ ಹಾಗೂ ಸಾಂಪ್ರದಾಯಿಕ ಮಹತ್ವ ಹೊಂದಿದೆ. ಅದರ ಆಶಯವನ್ನು ಸಮಕಾಲೀನ ಕೃಷಿ ಅಭಿವೃದ್ಧಿಯೊಂದಿಗೆ ಬೆಸೆಯುವ ಉದ್ದೇಶದಿಂದ ‘ಕದಳೀ ವಿಶ್ವದರ್ಶನ’ ಮೇಳವನ್ನು ಆಯೋಜಿಸಲಾಗಿದೆ ಎಂದರು.

ನ.29ರಂದು ಬಾಳೆ ಮುಹೂರ್ತನವೆಂಬರ್ 29ರಂದು ಬೆಳಿಗ್ಗೆ 6.30ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ನಡೆಯಲಿದೆ. ಬಳಿಕ ಶ್ರೀ ಚಂದ್ರೇಶ್ವರ, ಶ್ರೀ ಅನಂತೇಶ್ವರ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಫಲಾನ್ಯಾಸ ಪೂರ್ವಕ ಪ್ರಾರ್ಥನೆ ಸಲ್ಲಿಸಲಾಗುವುದು.

ಬೆಳಿಗ್ಗೆ 7.45ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಸೋದೆ ಮಠದ ಆವರಣದಲ್ಲಿರುವ ತೋಟದಲ್ಲಿ ಬಾಳೆ, ಕಬ್ಬು ಹಾಗೂ ತುಳಸಿ ಗಿಡಗಳನ್ನು ನೆಡುವ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.

ಶ್ರೀಪಾದರೊಂದಿಗೆ ಮಠದ ದಿವಾನರು, ಆಸ್ಥಾನ ವಿದ್ವಾಂಸರು, ಪಂಡಿತರು, ಭಕ್ತರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

150ಕ್ಕೂ ಅಧಿಕ ಬಾಳೆ ತಳಿಗಳ ಪರಿಚಯಮೇಳದ ಪ್ರಮುಖ ಆಕರ್ಷಣೆಯಾಗಿ 100ಕ್ಕೂ ಅಧಿಕ ವಿವಿಧ ತಳಿಗಳ ಬಾಳೆ ಗೊನೆಗಳ ಪ್ರದರ್ಶನ, ವಿವಿಧ ತಳಿಗಳ ಹಣ್ಣುಗಳ ಮಾರಾಟ ಹಾಗೂ 150ಕ್ಕೂ ಅಧಿಕ ಬಗೆಯ ಬಾಳೆ ತಳಿಗಳ ಪರಿಚಯ ಮತ್ತು ಸಸಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಭಾರತದಲ್ಲಿ ಸುಮಾರು 500ಕ್ಕೂ ಅಧಿಕ ಬಗೆಯ ಬಾಳೆ ತಳಿಗಳಿದ್ದು, ಕೆಲವು ತಳಿಗಳಿಗೆ ನಿರ್ದಿಷ್ಟ ಹೆಸರುಗಳಿಲ್ಲ. ಇಂತಹ ತಳಿಗಳ ಪೈಕಿ ವಿಶಿಷ್ಟವಾದ ಒಂದು ತಳಿಯನ್ನು ಆಯ್ಕೆ ಮಾಡಿ, ಮೇಳದ ಸಂದರ್ಭದಲ್ಲಿ ಸೋದೆ ಮಠದ ವತಿಯಿಂದ ನಾಮಕರಣ ಮಾಡಿ ಪರಿಚಯಿಸುವ ವಿಶೇಷ ಪ್ರಯತ್ನವೂ ನಡೆಯಲಿದೆ.

ಬಾಳೆಯಿಂದ ಮೌಲ್ಯವರ್ಧಿತ ಉತ್ಪನ್ನಗಳುಬಾಳೆಹಣ್ಣಿನಿಂದ ತಯಾರಿಸಿದ ವಿವಿಧ ಆಹಾರ ಮತ್ತು ಸಂಸ್ಕರಿತ ಉತ್ಪನ್ನಗಳು, ಬಾಳೆದಿಂಡು, ಎಲೆ ಹಾಗೂ ನಾರಿನಿಂದ ತಯಾರಿಸಿದ ಉಪಯುಕ್ತ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಬಾಳೆ ನಾರಿನಿಂದ ತಯಾರಿಸಿದ ಕರಕುಶಲ ವಸ್ತುಗಳು, ಜವಳಿ ಉತ್ಪನ್ನಗಳು ಹಾಗೂ ಪರಿಸರಸ್ನೇಹಿ ವಸ್ತುಗಳೂ ಗಮನ ಸೆಳೆಯಲಿವೆ.

ಕೃಷಿ ತ್ಯಾಜ್ಯವೆಂದು ಪರಿಗಣಿಸಲಾಗುವ ಬಾಳೆಯ ವಿವಿಧ ಭಾಗಗಳನ್ನು ಮೌಲ್ಯಯುತ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಸಾಧ್ಯತೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಲಾಗುವುದು.

ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಜಲಗಾಂವ್ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರು ಮತ್ತು ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ.

ತಮಿಳುನಾಡಿನ ತಿರುಚಿರಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ (NRCB) ವಿಜ್ಞಾನಿಗಳ ತಂಡ ಭಾಗವಹಿಸಿ ಬಾಳೆ ಕೃಷಿಯ ನೂತನ ಸಂಶೋಧನೆಗಳು, ತಂತ್ರಜ್ಞಾನ ಮತ್ತು ಸುಧಾರಿತ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಿದೆ.

ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (CFTRI) ವಿಜ್ಞಾನಿಗಳು ಬಾಳೆಹಣ್ಣಿನ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹಾಗೂ ಆಹಾರ ಸಂಸ್ಕರಣಾ ತಂತ್ರಜ್ಞಾನಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.

40 ಮಳಿಗೆಗಳು; ಎಲ್ಲವೂ ಉಚಿತಮೇಳದಲ್ಲಿ ಸುಮಾರು 40 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗುವುದು. ಬಾಳೆ ಹಣ್ಣು, ವಿವಿಧ ತಳಿಗಳು, ಕೃಷಿ ಉತ್ಪನ್ನಗಳು, ಮೌಲ್ಯವರ್ಧಿತ ವಸ್ತುಗಳು, ಕರಕುಶಲ ಉತ್ಪನ್ನಗಳು ಹಾಗೂ ಕೃಷಿ ತಂತ್ರಜ್ಞಾನಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮಳಿಗೆದಾರರಿಗೆ ಮೂರು ದಿನಗಳ ಕಾಲ ಮಳಿಗೆಗಳ ಸ್ಥಳಾವಕಾಶ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು. ಆರ್ಥಿಕ ಅಡಚಣೆಯಿಂದಾಗಿ ರೈತರು ಹಾಗೂ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪರಿಚಯಿಸುವ ಅವಕಾಶದಿಂದ ವಂಚಿತರಾಗಬಾರದು ಎಂಬುದು ಮಠದ ಆಶಯವಾಗಿದೆ.

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಉಡುಪಿ ಜಿಲ್ಲೆಯ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬಾಳೆ ಕೃಷಿ ಮತ್ತು ಬಾಳೆಯ ಮಹತ್ವವನ್ನು ಆಧರಿಸಿದ ಚಿತ್ರಕಲಾ ಸ್ಪರ್ಧೆಯನ್ನು ನವೆಂಬರ್ 22ರಂದು ಬೆಳಿಗ್ಗೆ 9 ಗಂಟೆಗೆ ಬೀಡಿನಗುಡ್ಡೆ ರಸ್ತೆಯ ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅತ್ಯುತ್ತಮ ಚಿತ್ರಕೃತಿಗಳನ್ನು ಆಯ್ಕೆ ಮಾಡಿ, ವಿಜೇತರಿಗೆ ಬಾಳೆ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.

ಮೂರು ದಿನಗಳ ವಿಶೇಷ ಉಪನ್ಯಾಸಮೇಳದ ಅಂಗವಾಗಿ ಕೃಷಿ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.

ನವೆಂಬರ್ 29ರಂದು ಸಂಜೆ 5.30ರಿಂದ 6.30ರವರೆಗೆ ಯಲ್ಲಾಪುರದ ಪ್ರಗತಿಪರ ರೈತ ಹಾಗೂ ಬಾಳೆ ತಳಿಗಳ ಸಂರಕ್ಷಕ ಡಾ. ಪ್ರಸಾದ ರಾಮ ಹೆಗಡೆ ಅವರು ‘ಬಾಳು ಬೆಳಗಿಸುವ ಬಾಳೆ’ ವಿಷಯದಡಿ ಬಾಳೆ ತಳಿಗಳ ಮಹತ್ವ ಮತ್ತು ಸಂರಕ್ಷಣೆಯ ಕುರಿತು ಮಾತನಾಡಲಿದ್ದಾರೆ.

ಬಳಿಕ ಮೈಸೂರಿನ ಕೃಷಿ ಉದ್ಯಮಿ ನವೀನ್ ಕುಮಾರ್ ಎಚ್.ಎಂ. ಅವರು ‘ಬಾ.ಕಾ.ಹು. ಬಾಳೆ ಕಾಯಿ ಹುಡಿ, ಪೌಷ್ಟಿಕತೆಯ ಅಡಿ, ಆರೋಗ್ಯಕ್ಕೆ ಹಿಡಿ’ ಎಂಬ ವಿಷಯದಡಿ ಕೃಷಿಯಿಂದ ಕೈಗಾರಿಕೆಯತ್ತ ಸಾಗಿದ ಅನುಭವ ಹಂಚಿಕೊಳ್ಳಲಿದ್ದಾರೆ.

ನವೆಂಬರ್ 30ರಂದು ಸಂಜೆ 5.30ರಿಂದ 6.30ರವರೆಗೆ ಚಾಮರಾಜನಗರದ ಆಕೃತಿ ಇಕೋ ಫ್ರೆಂಡ್ಲಿ ಎಂಟರ್‌ಪ್ರೈಸಸ್‌ನ ಸ್ಥಾಪಕಿ ವರ್ಷಾ ಶ್ರೀಕಂಠಸ್ವಾಮಿ ಅವರು ‘ಬಾಳೆಯ ಕಸಕ್ಕೆ ಹೊಸ ರೂಪ–ಇದು ಮನೆ ಬೆಳಗಿಸುವ ಆದಾಯದ ದೀಪ’ ವಿಷಯದಡಿ ಬಾಳೆ ನಾರಿನ ಕೈಕಸುಬು, ಪರಿಸರಸ್ನೇಹಿ ಕಲೆ ಮತ್ತು ಸುಸ್ಥಿರ ಭವಿಷ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮೂರು ದಿನಗಳ ಮೇಳದಲ್ಲಿ ವಿವಿಧ ಮಠಗಳ ಯತಿವರ್ಯರು, ರಾಜ್ಯ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಧಾರ್ಮಿಕ ಪರಂಪರೆ, ಕೃಷಿ ವಿಜ್ಞಾನ, ಮೌಲ್ಯವರ್ಧನೆ ಹಾಗೂ ಉದ್ಯಮಶೀಲತೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ರೈತರಿಗೆ ಹೊಸ ಅವಕಾಶಗಳನ್ನು ಕಲ್ಪಿಸುವುದು ‘ಕದಳೀ ವಿಶ್ವದರ್ಶನ’ ಮೇಳದ ಉದ್ದೇಶವಾಗಿದೆ.

No Comments

Leave A Comment