....ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಎನ್ ಐ ಎ ವರ್ಗಾಯಿಸಿ .ಅದು ಕೇ೦ದ್ರ ಸರಕಾರದ ಸ೦ಸ್ಥೆಯಲ್ಲವೇ....

ನಟಿ ನೋರಾ ಫತೇಹಿಗೆ ನ್ಯಾಯಾಲಯ ಖಡಕ್ ವಾರ್ನಿಂಗ್: ₹200 ಕೋಟಿ ಸುಲಿಗೆ ಕೇಸ್‌ನಲ್ಲಿ ವಿಚಾರಣೆಗೆ ನಟಿ ಗೈರು; ಹೊಸ ಸಮನ್ಸ್ ಜಾರಿ

ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ಭಾಗಿಯಾಗಿರುವ ₹200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿಯಲು ನಟಿ ನೋರಾ ಫತೇಹಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಅವರಿಗೆ ತೀವ್ರ ಛೀಮಾರಿ ಹಾಕಿದೆ. ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸಬೇಡಿ ಮತ್ತು ದಾರಿ ತಪ್ಪಿಸಬೇಡಿ” ಎಂದು ವಿಶೇಷ ನ್ಯಾಯಾಧೀಶರಾದ ಗಗನ್‌ದೀಪ್ ಸಿಂಗ್ ಅವರು ನೋರಾ ಫತೇಹಿ ಅವರ ಪರ ವಕೀಲರಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನ್ಯಾಯಾಲಯ ಛೀಮಾರಿ ಹಾಕಿದ್ದೇಕೆ?

2020-21ರ ಅವಧಿಯಲ್ಲಿ ಜೈಲಿನಲ್ಲಿದ್ದ ರಾನ್‌ಬಾಕ್ಸಿ ಕಂಪನಿಯ ಮಾಜಿ ಮಾಲೀಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿಗೆ ಉದ್ಯಮಿ ಸುಖೇಶ್ ಚಂದ್ರಶೇಖರ್ ಸುಮಾರು ₹200 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋರಾ ಫತೇಹಿ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿ ಎಂದು ಹೆಸರಿಸಲಾಗಿದೆ. ತಮ್ಮ ಹೇಳಿಕೆ ಮತ್ತು ಸಾಕ್ಷ್ಯ ದಾಖಲಿಸಲು ಅವರು ಇಂದು (ನವೆಂಬರ್ 2) ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಿತ್ತು. ಆದರೆ ಅವರು ಬರದೆ ಗೈರಾಗಿದ್ದರು. ಜೊತೆಗೆ, ದೆಹಲಿ ಪೊಲೀಸರು ಅಕ್ಟೋಬರ್ 22 ರಂದೇ ಇಮೇಲ್, ವಾಟ್ಸಾಪ್ ಮತ್ತು ಫೋನ್ ಕರೆಗಳ ಮೂಲಕ ನೋರಾ ಅವರಿಗೆ ಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೂ ನೋರಾ ಅವರ ಕಡೆಯಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹಾಗಾಗಿ, ಇಂದು ವಿಚಾರಣೆ ವೇಳೆ ನೋರಾ ಪರ ವಕೀಲರು ನಟಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದರು.

ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಾಧೀಶರು, “ಅವರು ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು ಇಲ್ಲಿರಬೇಕಿತ್ತು. ಅವರ ನಡೆ ಸರಿಯಿಲ್ಲ. ನ್ಯಾಯಾಲಯವನ್ನು ಆಟವಾಡಿಸಬೇಡಿ” ಎಂದು ತರಾಟೆಗೆ ತೆಗೆದುಕೊಂಡರು. ಅದರಂತೆ, ಕೋರ್ಟ್ ನೋರಾ ಅವರ ವಿನಾಯಿತಿ ಅರ್ಜಿಯನ್ನು ತಿರಸ್ಕರಿಸಿದ್ದಲ್ಲದೆ, ನವೆಂಬರ್ 6 ರಂದು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ.

ಪ್ರಕರಣದಲ್ಲಿ ನೋರಾ ಫತೇಹಿ ಪಾತ್ರವೇನು?

ನೋರಾ ಫತೇಹಿ ಈ ವಂಚನೆ ಪ್ರಕರಣದಲ್ಲಿ ಆರೋಪಿಯಲ್ಲ, ಬದಲಿಗೆ ಅವರು ಕೇವಲ ಸರ್ಕಾರಿ ಸಾಕ್ಷಿಯಾಗಿದ್ದಾರೆ. ಅದರಂತೆ, ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದ ಅವಧಿಯಲ್ಲೇ ನೋರಾ ಫತೇಹಿ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳು, ಬ್ಯಾಗ್‌ಗಳು ಮತ್ತು ವಜ್ರದ ಒಡವೆಗಳನ್ನು ಉಡುಗೊರೆಯಾಗಿ ನೀಡಿದ್ದ ಎಂದು ಜಾರಿ ನಿರ್ದೇಶನಾಲಯ ಪತ್ತೆಹಚ್ಚಿತ್ತು. ಅದರಂತೆ, ತಮಗೆ ಸುಕೇಶ್‌ನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ತಾವೊಬ್ಬ ಸಂತ್ರಸ್ತೆ ಎಂದು ನೋರಾ ಈ ಹಿಂದೆ ತನಿಖಾ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದರು. ಇದೇ ಕಾರಣಕ್ಕೆ ವಂಚನೆಯ ಹಣ ಹೇಗೆ ಬಳಕೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಕೋರ್ಟ್ ಅವರನ್ನು ಸಾಕ್ಷ್ಯ ನುಡಿಯಲು ಕರೆಯಿಸುತ್ತಿದೆ.

No Comments

Leave A Comment