ಉಡುಪಿ: ರಸ್ತೆ ಅಪಘಾತದಲ್ಲಿ ಆರ್‌ಎಸ್‌ಎಸ್ ಮುಖಂಡ ಸಾವು!....ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ 'ಅರ್ನಾಬ್' ಚಂಡಮಾರುತ, ತೀವ್ರ ಸ್ವರೂಪ, 3 ದಿನ ಮಳೆ ಸಾಧ್ಯತೆ IMD...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರಿಗೆ ಗುಡ್ ನ್ಯೂಸ್, ಬದಲಾಯ್ತು ಈ ನಿಯಮ, ಇನ್ನು ದರ್ಶನ ಸಲೀಸು

ದಕ್ಷಿಣ ಕನ್ನಡ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಪೂಜಾ ಕೈಂಕರ್ಯಗಳಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶೇಷವಾಗಿ ಆಶ್ಲೇಷ ನಕ್ಷತ್ರ ಹಾಗೂ ಸಾಲು ಸಾಲು ರಜಾದಿನಗಳಲ್ಲಿ ದಿನವೊಂದಕ್ಕೆ 2,000ರಿಂದ 3,000ಕ್ಕೂ ಹೆಚ್ಚು ಆಶ್ಲೇಷ ಬಲಿ ಪೂಜೆಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಉಂಟಾಗುತ್ತಿದ್ದ ನೂಕುನುಗ್ಗಲು ನಿಯಂತ್ರಿಸಲು ಜಾರಿಗೆ ತರಲಾಗಿದ್ದ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಇದೀಗ ರದ್ದುಗೊಳಿಸಲಾಗಿದೆ.

ಅಷ್ಟಮಂಗಲ ಪ್ರಶ್ನೆಯಲ್ಲಿ ದೊರೆತ ಸೂಚನೆಯಂತೆ ದೇವಸ್ಥಾನದ ಆಡಳಿತ ಮಂಡಳಿ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ವ್ಯವಸ್ಥೆಗೆ ಶೇ. 99ರಷ್ಟು ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರತಿಯೊಬ್ಬ ಭಕ್ತನ ಧಾರ್ಮಿಕ ಭಾವನೆಗೆ ಗೌರವ ನೀಡುವ ಉದ್ದೇಶದಿಂದ ಹಿಂದಿನ ವ್ಯವಸ್ಥೆಯನ್ನು ಮರುಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರ ಸುರಕ್ಷತೆ ಕುರಿತು ನೀಡಿದ್ದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಇಂದಿನಿಂದ ವೈಯಕ್ತಿಕ ಸಂಕಲ್ಪ ಸೇವೆ

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಅಧಿಕೃತ ಮಾಹಿತಿಯಂತೆ, ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ರದ್ದುಗೊಳಿಸಿ, ಇಂದಿನಿಂದ ಸಂಕಲ್ಪ ಮಂದಿರದಲ್ಲಿ ಹಿಂದಿನಂತೆ ಪ್ರತ್ಯೇಕ ವೈಯಕ್ತಿಕ ಸಂಕಲ್ಪ ಸೇವೆಗಳನ್ನು ಆರಂಭಿಸಲಾಗಿದೆ. ಇದರಿಂದ ಭಕ್ತರು ತಮ್ಮ ಧಾರ್ಮಿಕ ಆಚರಣೆಗಳನ್ನು ವೈಯಕ್ತಿಕವಾಗಿ ನೆರವೇರಿಸಲು ಅವಕಾಶ ದೊರೆತಂತಾಗಿದೆ.

ಭವ್ಯ ಮಾಸ್ಟರ್ ಪ್ಲಾನ್ ಸಂಕಲ್ಪ ಮಂದಿರ ನಿರ್ಮಾಣ

ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾದರೂ ಪೂಜಾ ಸೇವೆಗಳಿಗೆ ತೊಂದರೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದರಡಿ ವಿಶಾಲ ಹಾಗೂ ಸುಸಜ್ಜಿತವಾದ ನೂತನ ಸಂಕಲ್ಪ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ.

ಹೊಸ ಸಂಕಲ್ಪ ಮಂದಿರದಲ್ಲಿ ಸಾಮೂಹಿಕ ಸಂಕಲ್ಪ ಮತ್ತು ಪ್ರತ್ಯೇಕ ಸಂಕಲ್ಪ ಎಂಬ ಎರಡೂ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶವಿದೆ. ಇದರಿಂದ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಉತ್ತಮ ದರ್ಶನ ಹಾಗೂ ಪೂಜಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತಿದ್ದು, ಭಕ್ತರು ನೂತನ ಬದಲಾವಣೆಗಳಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

No Comments

Leave A Comment