ಉಡುಪಿ: ಎಸ್ಐಆರ್ ಮಾಹಿತಿ ನೆಪದಲ್ಲಿ ಮಹಿಳೆಯ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು- ಇಬ್ಬರು ಆರೋಪಿಗಳ ಬಂಧನ
ಉಡುಪಿ:ಅ.10, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ನೆಪದಲ್ಲಿ 74 ವರ್ಷದ ಮಹಿಳೆಯ ಮನೆಗೆ ನುಗ್ಗಿ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ದೋಚಿದ್ದ ಆರೋಪದ ಮೇಲೆ ಉಡುಪಿ ಪಟ್ಟಣ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5.53 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ಶ್ರೀನಿವಾಸ್ ಕಾರಂತ್ (49) ಸಲ್ಲಿಸಿದ ದೂರಿನ ಪ್ರಕಾರ, ಅವರ ತಾಯಿ ಶಾಂತಾ ಕಾರಂತ್ (74) ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅಕ್ಟೋಬರ್ 7, 2026 ರಂದು ಮಧ್ಯಾಹ್ನ 3.47 ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಎಸ್‌ಐಆರ್ ಬಗ್ಗೆ ಮಾಹಿತಿ ಸಂಗ್ರಹಿಸಲು ಬಂದಿದ್ದೇವೆ ಎಂದು ಹೇಳಿಕೊಂಡು ಅವರ ಮನೆಗೆ ಭೇಟಿ ನೀಡಿದರು.
ಅವರು ತಂದಿದ್ದ ದಾಖಲೆಗಳಿಗೆ ಸಹಿ ಹಾಕುವ ಮೊದಲು ತನ್ನ ಮಗನನ್ನು ಸಂಪರ್ಕಿಸುವುದಾಗಿ ಶಾಂತಾ ಮನೆಯೊಳಗೆ ಹೋದರು. ಆ ವೇಳೆ ಇಬ್ಬರು ವ್ಯಕ್ತಿಗಳು ವೃದ್ದೆಯನ್ನು ಹಿಂಬಾಲಿಸಿಕೊಂಡು ಹೋಗಿ, ನೆಲಕ್ಕೆ ತಳ್ಳಿ, ಅವರ ಕುತ್ತಿಗೆಯಿಂದ ಸುಮಾರು 30 ಗ್ರಾಂ ತೂಕದ ಮತ್ತು ಗಾರ್ನೆಟ್ ಮಣಿಗಳನ್ನು ಹೊಂದಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿದ್ದಾರೆ. ಸರದ ಮೌಲ್ಯ ಸುಮಾರು 4 ಲಕ್ಷ ರೂ. ಅಂದಾಜಿಸಲಾಗಿದೆ.
ಉಡುಪಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಉಡುಪಿ ಪಟ್ಟಣ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯ ಮಾಹಿತಿದಾರರಿಂದ ಬಂದ ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಅಕ್ಟೋಬರ್ 10 ರಂದು ಪೊಲೀಸರು ಮಣಿಪಾಲದ ಮಣ್ಣಪಳ್ಳದಲ್ಲಿ ಆರೋಪಿಗಳನ್ನು ಬಂಧಿಸಿದರು. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ವಾದಿರಾಜ್ ಗಾಣಿಗ (44) ಮತ್ತು ಕಾಪು ತಾಲೂಕಿನ ಪಡುಬಿದ್ರಿ ಗ್ರಾಮದ ಬೀಡುಬಾಡಿಯ ಸಚಿನ್ (30) ಅವರನ್ನು ಬಂಧಿಸಲಾಯಿತು.