ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!
ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಚುನಾವಣಾ ಆಯೋಗದ ವಿರುದ್ಧ ದೇಶಾದ್ಯಂತ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇತ್ತ ಶನಿವಾರ ಚುನಾವಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದೆ.
ಕೇಂದ್ರ ಸರ್ಕಾರ ಶನಿವಾರ ಕೈಗೊಂಡಿರುವ ಮಹತ್ವದ ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಭಾಗವಾಗಿ ಹಿರಿಯ ಐಎಎಸ್ ಅಧಿಕಾರಿ ಪ್ರಕಾಶ್ ರಾಜ್‌ಪುರೋಹಿತ್ ಅವರನ್ನು ಉಪ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಸಿಬ್ಬಂದಿ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ಅವರು 2030ರ ಏಪ್ರಿಲ್ 8ರವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ರಾಜಸ್ಥಾನ ಕೇಡರ್‌ನ 2010ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪ್ರಕಾಶ್ ರಾಜ್‌ಪುರೋಹಿತ್ ಅವರು ಸಂಜಯ್ ಕುಮಾರ್ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
27 ಅಧಿಕಾರಿಗಳಿಗೆ ಹೊಸ ಹೊಣೆ!
ಇದೇ ವೇಳೆ, 1996ನೇ ಬ್ಯಾಚ್‌ನ ಭಾರತೀಯ ಟೆಲಿಕಾಂ ಸೇವೆಯ ಅಧಿಕಾರಿ ವಿವೇಕ್ ಖರೆ ಅವರನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ (ACC), ಜಂಟಿ ಕಾರ್ಯದರ್ಶಿ ಮತ್ತು ಅದಕ್ಕೆ ಸಮಾನವಾದ ಹಂತದ ಹುದ್ದೆಗಳಿಗೆ ಒಟ್ಟು 27 ನಾಗರಿಕ ಸೇವಾ ಅಧಿಕಾರಿಗಳ ನೇಮಕಾತಿಗೆ ಅನುಮೋದನೆ ನೀಡಿದೆ.
ಗೃಹ ಸಚಿವಾಲಯಕ್ಕೆ ನಾಲ್ವರು ಜಂಟಿ ಕಾರ್ಯದರ್ಶಿಗಳು
ರವಿಶಂಕರ್, ಚಿತ್ತರಂಜನ್ ದಾಶ್, ಪಿ. ಮನೋಜ್ ಕುಮಾರ್ ಮತ್ತು ಅಭಿಷೇಕ್ ಭಗೋಟಿಯಾ ಅವರನ್ನು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಮೊಹಮ್ಮದ್ ವೈ. ಸಫೀರುಲ್ಲಾ ಕೆ. ಮತ್ತು ರಿತು ಶರ್ಮಾ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ಅಸ್ಸಾಂ-ಮೇಘಾಲಯ ಕೇಡರ್‌ನ 2009ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ವರ್ಣಾಲಿ ಡೇಕಾ ಅವರನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದೇ ಪ್ರಾಧಿಕಾರದಲ್ಲಿ ಜಂಟಿ ಕಾರ್ಯದರ್ಶಿ ಹಂತದ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಶಿಶ್ ಮಾಧವರಾವ್ ಅವರನ್ನು ನೇಮಿಸಲಾಗಿದೆ.
ಇತರ ಪ್ರಮುಖ ನೇಮಕಾತಿಗಳು
ನಿಖಿಲ್ ವರ್ಮಾ ಅವರನ್ನು ದೆಹಲಿಯ ವಿದೇಶಿ ವ್ಯಾಪಾರದ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ತನ್ವಿ ಸುಂದ್ರಿಯಾಲ್ ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಲಿದ್ದಾರೆ.
ಇಂದರ್‌ಜೀತ್ ಸಿಂಗ್ ಅವರನ್ನು ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಕೇಂದ್ರ ಸರ್ಕಾರದ ಈ ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಮೂಲಕ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನೇಮಕಾತಿಗಳಿಗೆ ಸಂಬಂಧಿಸಿದ ವಿವರಗಳನ್ನು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ಪ್ರಕಟಿಸಲಾಗಿದೆ.