..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........
ಕಾಪು : ಫ್ಲೈಓವರ್ ಮೇಲೆ ನಿಂತಿದ್ದ ಟೆಂಪೋಗೆ ರಿಕ್ಷಾ ಡಿಕ್ಕಿ – ತಾಯಿ, ಇಬ್ಬರು ಮಕ್ಕಳಿಗೆ ಗಾಯ
ಕಾಪು: ಸೆ.27, ರಾಷ್ಟ್ರೀಯ ಹೆದ್ದಾರಿ 66ರ ಫ್ಲೈಓವರ್‌ನಲ್ಲಿ ನಿಲ್ಲಿಸಿದ್ದ ಟೆಂಪೋಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಉಚ್ಚಿಲ ನಿವಾಸಿಗಳಾದ ಸಂಧ್ಯಾ ಹಾಗೂ ಅವರ ಮಕ್ಕಳಾದ ಗಯಾನ್ ಮತ್ತು ಸುವಿತ್ ಎಂದು ಗುರುತಿಸಲಾಗಿದೆ. ಸುವಿತ್ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಚ್ಚಿಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ರಿಕ್ಷಾ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾಪು ಪುರಸಭೆಯ ಟೆಂಪೋಗೆ ಡಿಕ್ಕಿ ಹೊಡೆದಿದೆ. ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯದ ಹಿನ್ನೆಲೆಯಲ್ಲಿ ಟೆಂಪೋವನ್ನು ಅಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರು ಹಾಗೂ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದರು. ಸ್ಥಳೀಯರಾದ ಸೂರಿ ಶೆಟ್ಟಿ ಮತ್ತು ನಾಗರಾಜ್ ಅವರ ನೆರವಿನಿಂದ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.