ಉಡುಪಿ ಶ್ರೀ ರಾಘವೇಂದ್ರ ಮಠದಲ್ಲಿ ಆ. 29-31: ಆರಾಧನಾ ಮಹೋತ್ಸವ...ಸೆ.4ಮತ್ತು 5ರ೦ದು ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಸ೦ಭ್ರಮ...

ಮೆಣಸಿನಕಾಯಿ ತುಂಬಿದ್ದ ಲಾರಿ ಪಲ್ಟಿಯಾಗಿ ಕಾರಿಗೆ ಡಿಕ್ಕಿ; ಭೀಕರ ಅಪಘಾತದಲ್ಲಿ ಆರು ಮಂದಿ ಸಜೀವ ದಹನ

ವಾರ್ಧಾ: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಮೆಣಸಿನಕಾಯಿ ತುಂಬಿದ್ದ ಕಂಟೇನರ್ ಟ್ರಕ್ ಪಲ್ಟಿಯಾಗಿ, ಕಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಜನ ಸಜೀವ ದಹನವಾಗಿದ್ದಾರೆ.

ಮುಂಬೈನಿಂದ ನಾಗ್ಪುರಕ್ಕೆ ಸಂಪರ್ಕ ಕಲ್ಪಿಸುವ ಆರು ಪಥಗಳ ಎಕ್ಸ್‌ಪ್ರೆಸ್‌ವೇ ಸಮೃದ್ಧಿ ಮಹಾಮಾರ್ಗ್‌ನಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ವಾಹನಗಳು ಸುಟ್ಟು ಕರಕಲಾಗಿವೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು, ಟ್ರಕ್ ಚಾಲಕ ಮತ್ತು ಅವರ ಸಹಾಯಕ ಸಜೀವ ದಹನವಾಗಿದ್ದಾರೆ.

ತನಿಖೆಯ ಪ್ರಕಾರ, ಈ ಅಪಘಾತಕ್ಕೂ ಮುನ್ನ ಎಥೆನಾಲ್ ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದ್ದು, ರಸ್ತೆಯಲ್ಲಿ ಇಂಧನ ಸೋರಿಕೆಯಾಗಿತ್ತು. ಇದರಿಂದ ವಾಹನಗಳ ಸಂಚಾರವನ್ನು ಮತ್ತೊಂದು ಲೇನ್‌ಗೆ ತಿರುಗಿಸಲಾಗಿತ್ತು. ಈ ವೇಳೆ ಪುಣೆಯಿಂದ ವಾರ್ಧಾಕ್ಕೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಅತಿವೇಗವಾಗಿ ಬಂದ ಮೆಣಸಿನಕಾಯಿ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಕ್ಷಣಾರ್ಧದಲ್ಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಕಾರೊಂದರಲ್ಲಿದ್ದ ನಾಲ್ವರು ವಾರ್ಧಾದ ಸಲೋದ್ ನಿವಾಸಿಗಳಾಗಿದ್ದು, ಅವರು ತಮ್ಮ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಎಂಬಿಎ ಕೋರ್ಸ್‌ಗಾಗಿ ಪುಣೆಯ ಕಾಲೇಜಿಗೆ ಬಿಟ್ಟ ನಂತರ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಮೃತರನ್ನು ರಾಜೇಶ್ ಟಿಪ್ಲೆ, ಅವರ ಪತ್ನಿ ಸುಷ್ಮಾ ಟಿಪ್ಲೆ, ಅವರ ಮಗಳು ಜಾನ್ವಿ ಮತ್ತು ಅವರ ಚಾಲಕ ಅಂಕುಶ್ ರಾವುತ್ ಎಂದು ಗುರುತಿಸಲಾಗಿದೆ. ಇತರ ಇಬ್ಬರನ್ನು ಟ್ರಕ್ ಚಾಲಕ ಸಂಜಯ್ ಕುಮಾರ್ ಮತ್ತು ಕ್ಲೀನರ್ ಸಮರ್ಜಿತ್ ಪಾಲ್ ಎಂದು ಗುರುತಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಸುರಕ್ಷತಾ ಪಡೆ, ವಾರ್ಧಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು

ಈ ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

No Comments

Leave A Comment