ಎಲ್ಲಾ ಬ್ರ್ಯಾಂಡ್‌ಗಳ ಅಂತಿಮ ಹೊಸ ಎಂಆರ್ ಪಿ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಮೇ 11ರಿಂದ ಹೊಸ ಎಂಆರ್ ಪಿ ಜಾರಿಗೆ ಬಂದಿದ್ದರೂ ಜನರಿಗೆ ಹೊಸ ದರಗಳ ಬಗ್ಗೆ ಇನ್ನೂ ಸಂಪೂರ್ಣ ಅರಿವು ಇಲ್ಲ. ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಕಾದು ನೋಡಬೇಕಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉದ್ಯಮ ಮೂಲಗಳು ತಿಳಿಸಿವೆ. ಎಐಬಿ ನೀತಿಯು ಆರು ದಶಕ ಹಳೆಯ ‘ಬಲ್ಕ್ ಲೀಟರ್ ಆಲ್ಕೊಹಾಲ್’ ಆಧಾರಿತ ತೆರಿಗೆ ನೀತಿಯನ್ನು ಬದಲಿಸಿದೆ.
ರಾಜ್ಯ ಸರ್ಕಾರವು ಮೇ 8ರಂದು ಹೊಸ ತೆರಿಗೆ ನೀತಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು, 2026’ ನ್ನು ಪ್ರಕಟಿಸಿತ್ತು. ಇದು ಮೇ 11ರಿಂದ ಜಾರಿಗೆ ಬಂದಿದೆ. ಎಐಬಿ ತೆರಿಗೆ ನೀತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ.
AiB ಎಂದರೆ “ಬ್ರಾಂಡಿ, ವಿಸ್ಕಿ, ಜಿನ್, ರಮ್, ಬಿಯರ್, ವೈನ್, ಫ್ರೂಟ್ ವೈನ್, ಫೋರ್ಟಿಫೈಡ್ ವೈನ್ ಮುಂತಾದ ಮದ್ಯಗಳಲ್ಲಿ ಪ್ರತಿ ಲೀಟರ್‌ಗೆ ಇರುವ ಆಲ್ಕೊಹಾಲ್ ಪ್ರಮಾಣ/ಪರಿಮಾಣ ಎಂದು ಅರ್ಥ. ಇದಲ್ಲದೆ, ಕರ್ನಾಟಕದಲ್ಲಿ ಎಂಆರ್ ಪಿ ಆಧಾರದಲ್ಲಿ ಮದ್ಯ ಮಾರಾಟವಾಗುವ ಅಬಕಾರಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಸರ್ಕಾರವು 16ರಿಂದ 8ಕ್ಕೆ ಇಳಿಸಿದೆ.