.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
1995ರ ಪಾಟ್ನಾ ಪ್ರಕರಣದಲ್ಲಿ ಸಂಸದ ಪಪ್ಪು ಯಾದವ್ ಬಂಧನ; ಸೇಡಿನ ಕೃತ್ಯ ಎಂದ ರಾಹುಲ್ ಗಾಂಧಿ
ಪಾಟ್ನಾ: 1995ರ ಪಾಟ್ನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡರಾತ್ರಿ ಪಪ್ಪು ಯಾದವ್ ಎಂದೂ ಕರೆಯಲ್ಪಡುವ ಪೂರ್ಣಿಯಾ ಸಂಸದ ರಾಜೇಶ್ ರಂಜನ್ ಅವರನ್ನು ಬಂಧಿಸಲಾಗಿದ್ದು, ನಂತರ ಆರೋಗ್ಯ ಸಮಸ್ಯೆಗಳ ಕಾರಣ ಅವರನ್ನು ಶನಿವಾರ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ದಾಖಲಿಸಲಾಗಿದೆ.
ಬಂಧನದ ನಂತರ ಯಾದವ್ ಅವರನ್ನು ಶುಕ್ರವಾರ ರಾತ್ರಿ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಐಜಿಐಎಂಎಸ್) ದಾಖಲಿಸಲಾಯಿತು ಮತ್ತು ನಂತರ ತಪಾಸಣೆಗಾಗಿ ಇಂದಿರಾ ಗಾಂಧಿ ಹೃದ್ರೋಗ ಸಂಸ್ಥೆಗೆ(ಐಜಿಐಸಿ) ಕರೆದೊಯ್ಯಲಾಯಿತು.
1995ರಲ್ಲಿ ಪಪ್ಪು ಯಾದವ್ ಅವರು ವೈಯಕ್ತಿಕ ಬಳಕೆಗಾಗಿ ಎಂದು ಮನೆ ಬಾಡಿಗೆಗೆ ಪಡೆದು, ಬಳಿಕ ಅದನ್ನು ರಾಜಕೀಯ ಕಚೇರಿಯನ್ನಾಗಿ ಪರಿವರ್ತಿಸಿದ್ದರು ಎಂದು ಆರೋಪಿಸಿ ಮನೆ ಮಾಲೀಕರಾದ ವಿನೋದ್ ಬಿಹಾರಿ ಲಾಲ್, ಪಾಟ್ನಾದ ಗರ್ದಾನಿಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಂಚನೆ, ನಕಲಿ ದಾಖಲೆ, ಅತಿಕ್ರಮಣ, ಕ್ರಿಮಿನಲ್ ಬೆದರಿಕೆ ಮತ್ತು ಪಿತೂರಿ ಆರೋಪಗಳನ್ನು ಮಾಡಲಾಗಿತ್ತು.
ಈ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಪಪ್ಪು ಯಾದವ್ ಅವರನ್ನು ಬಂಧಿಸಲಾಗಿದೆ.
ನಿನ್ನೆ ರಾತ್ರಿ ಪೊಲೀಸರು ಬಂಧನಕ್ಕಾಗಿ ಆಗಮಿಸಿದ ವೇಳೆ, ಪೊಲೀಸರೊಂದಿಗೆ ಹೋಗಲು ನಿರಾಕರಿಸಿದ ಪಪ್ಪು ಯಾದವ್, ನ್ಯಾಯಾಲಯ ಹೊರಡಿಸಿರುವ ವಾರಂಟ್ ಬಂಧನದ್ದಲ್ಲ. ಕೇವಲ ಆಸ್ತಿ ಮುಟ್ಟುಗೋಲು ಎಂದು ವಾದಿಸಿದರು ಎಂದು ಹೇಳಲಾಗಿದೆ.
ಕಡೆಗೂ ಪೊಲೀಸರು ಅವರನ್ನು ಬಂಧಿಸಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಭಾಗಿಯಾಗಿದ್ದ ಯಾದವ್ ಮನೆಗೆ ಮರಳಿದ ಒಂದು ಗಂಟೆಯ ಬಳಿಕ ಈ ಬಂಧನ ನಡೆದಿದೆ. ಈ ವೇಳೆ ಯಾದವ್ ಬೆಂಬಲಿಗರು ಅವರ ಮನೆಯ ಸುತ್ತ ಸುತ್ತುವರೆದಿದ್ದರು.
ಏತನ್ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಪ್ಪು ಯಾದವ್‌ಗೆ ಬೆಂಬಲಕ್ಕೆ ನಿಂತಿದ್ದು, “ಪಾಟ್ನಾದಲ್ಲಿ ನೀಟ್ ಆಕಾಂಕ್ಷಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದು, ರಾಜ್ಯ ಸರ್ಕಾರದ ನ್ಯೂನತೆಗಳನ್ನು ಯಾದವ್ ಬಹಿರಂಗಪಡಿಸಿದ್ದಾರೆ. ವಿದ್ಯಾರ್ಥಿನಿ ಕುಟುಂಬ ನ್ಯಾಯಯುತ ತನಿಖೆ ಕೋರಿದಾಗ, ಬಿಜೆಪಿ-ಎನ್‌ಡಿಎ ಅದೇ ಹಳೆಯ ನಾಟಕ ಶುರು ಮಾಡಿದ್ದು, ಪ್ರಕರಣವನ್ನು ಹಳಿತಪ್ಪಿಸಲಾಗುತ್ತಿದೆ ಮತ್ತು ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ಮಗಳಿಗೆ ನ್ಯಾಯಕ್ಕಾಗಿ ದೃಢವಾಗಿ ಧ್ವನಿಯೆತ್ತಿದ್ದು ಸಹ ಸಂಸದ ಪಪ್ಪು ಯಾದವ್. ಇಂದು ಅವರ ಬಂಧನವು ಸ್ಪಷ್ಟವಾಗಿ ರಾಜಕೀಯ ದ್ವೇಷದ ಕೃತ್ಯವಾಗಿದ್ದು, ಪ್ರಶ್ನಿಸುವ ಪ್ರತಿಯೊಂದು ಧ್ವನಿಯನ್ನು ಅಡಗಿಸುವ ಗುರಿ ಹೊಂದಿದೆ ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.