ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಸೋಮವಾರದಿಂದ ದರ ಏರಿಕೆ ಇಲ್ಲ- ಸಂಸದ ತೇಜಸ್ವಿ ಸೂರ್ಯ ಮಾಹಿತಿ.....ಭಾರತ–ಅಮೆರಿಕ ಮಧ್ಯಂತರ ಒಪ್ಪಂದದಲ್ಲಿ ರೈತರಿಗೆ ಹಾನಿಯಾಗುವ ಯಾವುದೇ ವಸ್ತುಗಳಿಲ್ಲ: ಸಚಿವ ಪಿಯೂಷ್ ಗೋಯಲ್...
ಮುಂಬಯಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ರಿತು ತಾವಡೆ ಆಯ್ಕೆ
ಮುಂಬೈ: ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ಮೇಯರ್ ಚುನಾವಣೆಗೆ ರಿತು ತಾವಡೆ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಯಾಗಿ ಶನಿವಾರ ಆಯ್ಕೆ ಮಾಡಿದೆ. ಅದರ ಮಿತ್ರ ಪಕ್ಷ ಶಿವಸೇನೆ ಸಂಜಯ್ ಘಾಡಿ ಅವರನ್ನು ಉಪ ಮೇಯರ್ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.
ರಿತು ತಾವಡೆ ವಾರ್ಡ್ ಸಂಖ್ಯೆ 132ರ ಕಾರ್ಪೊರೇಟರ್ ಆಗಿದ್ದಾರೆ. ಸಂಜಯ್ ಘಾಡಿ ವಾರ್ಡ್ ಸಂಖ್ಯೆ 5ರಿಂದ ಆಯ್ಕೆಯಾಗಿದ್ದಾರೆ. ಸಂಜಯ್ ಈ ಹಿಂದೆ 15 ತಿಂಗಳ ಕಾಲ ಉಪಮೇಯರ್ ಆಗಿ ಕೆಲಸ ಮಾಡಿದ್ದರು.
227 ಸದಸ್ಯ ಬಲದ ಪಾಲಿಕೆ ಚುನಾವಣೆ ಇತ್ತೀಚೆಗೆ ನಡೆದಿತ್ತು. ಬಿಜೆಪಿ 89 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ 29 ಸ್ಥಾನಗಳನ್ನು ಗೆದ್ದುಕೊಂಡಿದೆ. ಒಟ್ಟಾರೆ 118 ಸದಸ್ಯ ಬಲ ಹೊಂದಿರುವ ಈ ಮೈತ್ರಿಕೂಟ ಸರಳ ಬಹುಮತ ಪಡೆದುಕೊಂಡಿದೆ.
25 ವರ್ಷಗಳ ಕಾಲ ಪಾಲಿಕೆ ಆಡಳಿತ ನಡೆಸಿದ್ದ ಶಿವಸೇನೆ (ಯುಬಿಟಿ) ಈ ಬಾರಿ 65 ಸ್ಥಾನಗಳನ್ನು ಗೆದ್ದು ಅಧಿಕಾರದಿಂದ ಕೆಳಗಿಳಿದಿದೆ. ಅದರ ಮೈತ್ರಿ ಪಕ್ಷಗಳಾದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 6, ಎನ್‌ಸಿಪಿ (ಶರದ್) 1 ಸ್ಥಾನ ಪಡೆದಿತ್ತು. ಇತರೆ ಪಕ್ಷಗಳಾದ ಕಾಂಗ್ರೆಸ್ 24, ಎಐಎಂಐಎಂ 8, ಎನ್‌ಸಿಪಿ (ಅಜಿತ್) 3, ಸಮಾಜವಾದಿ ಪಕ್ಷ 2 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.