ಧರ್ಮಸ್ಥಳ ಪ್ರಕರಣ: ಮಾಧ್ಯಮ ಮೇಲಿನ ನಿರ್ಬಂಧ ತೆರವು, ಹೈಕೋರ್ಟ್ ಆದೇಶ!
ಬೆಂಗಳೂರು: ಧರ್ಮಸ್ಥಳದಲ್ಲಿ ಸುಮಾರು ಎರಡು ದಶಕಗಳಿಂದ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ/ ಪ್ರಕಟ ಮಾಡದಂತೆ ದಕ್ಷಿಣ ಕನ್ನಡ ಜಿಲ್ಲೆಯ ಡಿಜಿಟಲ್ ಮಾಧ್ಯಮವೊಂದರ ವಿರುದ್ಧ ನಗರದ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.ಆದಾಗ್ಯೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಮಧ್ಯಂತರ ಅರ್ಜಿಯನ್ನು ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಸೂಚಿಸಿದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಪೀಠ ಆದೇಶಿಸಿದೆ.ಈ ಸಂಬಂಧ ನಗರ ಸಿವಿಲ್ ಕೋರ್ಟ್ ನ 10ನೇ ಹೆಚ್ಚುವರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ‘ಕುಡ್ಲ ರ್‍ಯಾಂಪೇಜ್ (Kudla Rampage) ಸಲ್ಲಿಸಿದ್ದ ಅರ್ಜಿಯನ್ನು ಭಾಗಶ: ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪನ್ನು ಶುಕ್ರವಾರ ಪ್ರಕಟಿಸಿತು.
ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ದಾವೆ, ಕ್ರಿಮಿನಲ್ ಪ್ರಕ್ರಿಯೆ, ಆರೋಪ, ಪ್ರತ್ಯಾರೋಪದ ಮೇಲೆ ಈ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದೇಶದಲ್ಲಿ ಪರಿಗಣಿಸಿರುವ ಒಂದು ಅಂಶವನ್ನು ಹೊರತುಪಡಿಸಿ ಎಲ್ಲಾ ವಾದಗಳು ಮುಕ್ತವಾಗಿರಬೇಕು. ಅಗತ್ಯ ಆದೇಶಗಳನ್ನು ಜಾರಿಗೊಳಿಸಲು ಅರ್ಜಿದಾರರು ಮತ್ತು ಇತರ ಕಕ್ಷಿದಾರರು ಸೆಷನ್ಸ್ ನ್ಯಾಯಾಲಯಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.