
ಪಾಕ್‌ನ ಭಯೋತ್ಪಾದನೆ ಸಹಿಸಲ್ಲ ಎಂದು ಜಗತ್ತಿಗೆ ತಿಳಿಸಲಾಗಿದೆ: ಯುರೋಪ್ ಪ್ರವಾಸದ ಬಳಿಕ ಸರ್ವಪಕ್ಷ ನಿಯೋಗ
ನವದೆಹಲಿ: ‘ಆಪರೇಷನ್ ಸಿಂಧೂರ ಔಟ್‌ರೀಚ್’ ಅಡಿಯಲ್ಲಿ ಆರು ಯುರೋಪಿಯನ್ ರಾಷ್ಟ್ರಗಳಿಗೆ ಭೇಟಿ ನೀಡಿದ ನಂತರ, ಭಾರತೀಯ ಸಂಸತ್ ಸದಸ್ಯರು ಪಾಕಿಸ್ತಾನದಿಂದ ಉಂಟಾಗುವ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಅದನ್ನು ‘ಯುದ್ಧದ ಕೃತ್ಯ’ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.
ಹಿರಿಯ ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ, ಸರ್ವಪಕ್ಷ ನಿಯೋಗವು ಫ್ರಾನ್ಸ್, ಇಟಲಿ, ಡೆನ್ಮಾರ್ಕ್, ಯುಕೆ, ಬೆಲ್ಜಿಯಂ ಮತ್ತು ಜರ್ಮನಿಗೆ ಭೇಟಿ ನೀಡಿತು.
ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದು, ಭಾರತದ ಮೇಲೆ ಪರಿಣಾಮ ಬೀರುವ ಭಯೋತ್ಪಾದನೆಯ ಬಗ್ಗೆ ಅಂತರರಾಷ್ಟ್ರೀಯ ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಐಕ್ಯತೆಯನ್ನು ಪ್ರಸ್ತುತಪಡಿಸುವುದು ಇದರ ಉದ್ದೇಶವಾಗಿತ್ತು.
ತಮ್ಮ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ರವಿಶಂಕರ್ ಪ್ರಸಾದ್, ‘ನನ್ನ ನೇತೃತ್ವದ ಇಡೀ ನಿಯೋಗ ಮೊದಲು ಫ್ರಾನ್ಸ್‌ಗೆ ಹೋಯಿತು. ನಂತರ ನಾವು ಇಟಲಿಗೆ ಭೇಟಿ ನೀಡಿದ್ದೇವೆ. ನಂತರ ಡೆನ್ಮಾರ್ಕ್ (ಕೋಪನ್‌ಹೇಗನ್), ಇಂಗ್ಲೆಂಡ್, ಬ್ರಸೆಲ್ಸ್ ಮತ್ತು ಜರ್ಮನಿಗೆ ಭೇಟಿ ನೀಡಿದ್ದೇವೆ. ಪ್ರತಿಯೊಂದು ಸ್ಥಳದಲ್ಲೂ ನಾವು ಸಂಸದರು, ಸಚಿವರು, ಚಿಂತಕರ ಚಾವಡಿಗಳು, ಮಾಧ್ಯಮಗಳು ಮತ್ತು ಭಾರತೀಯ ಸಮುದಾಯಗಳೊಂದಿಗೆ ಚರ್ಚೆ ನಡೆಸಿದ್ದೇವೆ. ನಿಜವಾಗಿಯೂ ಎದ್ದು ಕಾಣುವ ಒಂದು ವಿಷಯವೆಂದರೆ, ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎಲ್ಲ ದೇಶಗಳು ಇದನ್ನು ಬಲವಾಗಿ ಖಂಡಿಸಿದವು ಮತ್ತು ಭಾರತದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದವು’ ಎಂದು ಹೇಳಿದರು.
ಬಿಜೆಪಿ ಸಂಸದ ಗುಲಾಮ್ ಅಲಿ ಖತಾನಾ ಮಾತನಾಡಿ, ‘ಪಾಕಿಸ್ತಾನದಿಂದಾಗುವ ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಅಂತಹ ಯಾವುದೇ ಕೃತ್ಯವನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ. ಈ ಸಂದೇಶವನ್ನು ಯುರೋಪಿನಾದ್ಯಂತ ನಮ್ಮ ಸಹವರ್ತಿಗಳಿಗೆ ದೃಢವಾಗಿ ತಲುಪಿಸಿದ್ದೇವೆ ಮತ್ತು ಅಂತರರಾಷ್ಟ್ರೀಯ ಸಮುದಾಯವು ಇದನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದು ಹೇಳಿದರು.
ಭಾರತಕ್ಕೆ ದೀರ್ಘಕಾಲದಿಂದ ಇರುವ ಬೆದರಿಕೆಗಳನ್ನು ಬಹಿರಂಗಪಡಿಸುವುದರ ಮೇಲೆ ಈ ಈ ಔಟ್‌ರೀಚ್ ಕೇಂದ್ರೀಕೃತವಾಗಿದೆ ಎಂದು ಬಿಜೆಪಿ ಸಂಸದೆ ದಗ್ಗುಬಾಟಿ ಪುರಂದೇಶ್ವರಿ ತಿಳಿಸಿದರು.
‘ನಾವು ಭಾರತದ ಪರವಾಗಿ ನಿಲ್ಲುವುದು ಮತ್ತು ಏಳು ದಶಕಗಳಿಂದ ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದನೆಯ ಪಿಡುಗನ್ನು ಬಹಿರಂಗಪಡಿಸುವ ಒಂದೇ ಉದ್ದೇಶದಿಂದ ಹೋಗಿದ್ದೆವು. ನಾವು ಪುರಾವೆಗಳನ್ನು ಪ್ರಸ್ತುತಪಡಿಸಿದ್ದೇವೆ. ಸಂಸದರು, ಅಧಿಕಾರಿಗಳು ಮತ್ತು ಇತರರನ್ನು ಭೇಟಿ ಮಾಡಿದ್ದೇವೆ. ನಮಗೆ ಪ್ರತಿಯೊಂದು ಕಡೆಯಿಂದಲೂ ಬಲವಾದ ನೈತಿಕ ಬೆಂಬಲ ಸಿಕ್ಕಿತು’ ಎಂದರು.