ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ವಂಚನೆ ಆರೋಪ: ‘ಕೋಟಿಗೊಬ್ಬ’ ಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ FIR ದಾಖಲು

ಬೆಂಗಳೂರು: ಚಿತ್ರ ನಿರ್ಮಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ 67.5 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಶಿವರಾಜ್​ ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರನ್ನೂ ಹಾಕೊಂಡು ಮಲ್ಟಿ ಸ್ಟಾರರ್ ಸಿನಿಮಾ ಮಾಡ್ತಿದ್ದೀನಿ. ಅದಕ್ಕೆ ಫೈನಾನ್ಸ್ ಬೇಕಿದೆ ಎಂದು 92.50 ಲಕ್ಷ ರೂ ಪಡೆದು, ಆ ಪೈಕಿ 67.50 ಲಕ್ಷ ರೂ ಹಿಂದಿರುಗಿಸದೇ ಬೆದರಿಕೆ ಹಾಕಿದ್ದಾರೆ ಎಂದು ಲಕ್ಷ್ಮೀ ಎಂಬ ಮಹಿಳೆ ಆರೋಪ ಮಾಡಿದ್ದಾರೆ.

ಮಹಿಳೆಗೆ 2023ರಲ್ಲಿ ನಿರ್ಮಾಪಕ ಸೂರಪ್ಪ ಬಾಬು ಅವರ ಪರಿಚಯವಾಗಿತ್ತು. ತಾವು ಶಿವರಾಜ್ ಕುಮಾರ್ ಹಾಗೂ ಗಣೇಶ್ ಅವರೊಂದಿಗೆ ಕೆ.ಎಸ್.ರವಿಕುಮಾರ್ ಅವರ ನಿರ್ದೇಶನದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಾಲ ಬೇಕು ಎಂದು ಸೂರಪ್ಪ ಬಾಬು ಅವರು ಕೇಳಿದ್ದರು.

ಅದರಂತೆ ಹಂತ ಹಂತವಾಗಿ 92 ಲಕ್ಷ ಪಡೆದು ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ದರು. ನಂತರ ಪರಿಶೀಲಿಸಿದಾಗ ಶಿವರಾಜ್ ಕುಮಾರ್ ಮತ್ತು ಗಣೇಶ್ ಅವರ ಹಾಕಿಕೊಂಡು ಯಾವುದೇ ಚಿತ್ರ ನಿರ್ಮಿಸುತ್ತಿಲ್ಲ ಎಂಬುದು ಗೊತ್ತಾಯಿತು.

ಸಿನಿಮಾ ಮಾಡದೆ, ಅಗ್ರಿಮೆಂಟ್ ಪ್ರಕಾರ ಹಣ ವಾಪಸ್ ಕೊಡದೆ ಆಟವಾಡಿಸುತ್ತಿದ್ದರು. ಪದೇ ಪದೇ ಕೇಳಿದಾಗ ಕೇವಲ 25 ಲಕ್ಷ ಕೊಟ್ಟಿದ್ದರು. ಉಳಿದ ಹಣವನ್ನು ಕೇಳಿದಾಗ ನನ್ನಿಂದಾಗುವುದು ಇಷ್ಟೇ, ಏನಾದರೂ ಮಾಡಿಕೋ ಎಂದು ಬೆದರಿಕೆ ಹಾಕಿದರು.

ಬಾಬು ನನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಸಿನಿಮಾ ಮಾಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ದೂರು ಹಿನ್ನೆಲೆಯಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿದೆ.

ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದ್ದು, ವಿಚಾರಣೆಗಾಗಿ ಬಾಬುಗೆ ನೋಟಿಸ್ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಬು ಅವರು ಕೋಟಿಗೊಬ್ಬ, ಪೃಥ್ವಿ ಮತ್ತು ಕೋಟಿಗೊಬ್ಬ 2 ಸಿನಿಮಾ ನಿರ್ಮಾಣದ ಮೂಲಕ ಹೆಸರು ಗಳಿಸಿದ್ದಾರೆ.

kiniudupi@rediffmail.com

No Comments

Leave A Comment