ಕೇರಳ ಸ್ಟೋರಿ ಸಿನಿಮಾ ತಮ್ಮ ಮೇಲಿನ ದಾಳಿ ಎಂದು ಭಾವಿಸಿದರೆ ಅವರು ಭಯೋತ್ಪಾದಕರು: ಕಂಗನಾ ರಣಾವತ್
ಮುಂಬೈ: ವಿವಾದಿತ ಅಂಶಗಳನ್ನು ಹೊಂದಿರುವ ದಿ ಕೇರಳ ಸ್ಟೋರಿ ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಂತೆಯೇ ಇದೀಗ ಚಿತ್ರದ ಬೆನ್ನಿಗೆ ನಿಂತಿರುವ ಬಾಲಿವುಡ್ ನಟಿ ಕಂಗನಾ ರಣಾವತ, ಕೇರಳ ಸ್ಟೋರಿ ಸಿನಿಮಾ ತಮ್ಮ ಮೇಲಿನ ದಾಳಿ ಎಂದು ಭಾವಿಸಿದರೆ ಅವರು ಭಯೋತ್ಪಾದಕರು ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಕೇರಳ ಸ್ಟೋರಿ ಸಿನಿಮಾ ಇನ್ನೂ ನೋಡಿಲ್ಲ. ಆದರೆ, ಇದನ್ನು ಬ್ಯಾನ್ ಮಾಡಲು ಕೆಲವರು ಬಹಳ ದೊಡ್ಡ ಷಡ್ಯಂತ್ರ ಹಾಗೂ ಪ್ರಯತ್ನ ನಡೆಸಿದ್ದಾರೆ. ಈ ಚಿತ್ರ ಐಸಿಸ್ ಸಂಘಟನೆ ಹೊರತುಪಡಿಸಿ ಇನ್ನಾರನ್ನೂ ಕೆಟ್ಟದಾಗಿ ಚಿತ್ರಿಸಿಲ್ಲ. ಬ್ಯಾನ್ ಮಾಡಬೇಕು ಎಂದವರಿಗೆ ಕೇರಳ ಹೈಕೋರ್ಟ್ ಕೂಡ ಈ ಚಿತ್ರವನ್ನು ಬ್ಯಾನ್ ಮಾಡೋಕೆ ಆಗಲ್ಲ ಎಂದು ಹೇಳಿದೆ. ಹಾಗಾಗಿ ದಿ ಕೇರಳ ಸ್ಟೋರಿ ಸಿನಿಮಾ ತಮ್ಮ ಮೇಲಿನ ದಾಳಿ ಎಂದು ಭಾವಿಸಿದರೇ ಅವರು ಭಯೋತ್ಪಾದಕರೇ ಸರಿ ಎಂದು ಹೇಳಿದ್ದಾರೆ.
ಸುದೀಪ್ತೊ ಸೇನ್ ಅವರ ನಿರ್ದೇಶನದ ಈ ಸಿನಿಮಾವನ್ನು ವಿಫುಲ್ ಶಾ ನಿರ್ಮಾಣ ಮಾಡಿದ್ದಾರೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಿಲಾನಿ, ಸಿದ್ಧಿ ಇದ್ನಾನಿ ಅವರು ಲವ್ ಜಿಹಾದ್ಗೆ ಒಳಗಾಗುವ ಹಿಂದೂ ಯುವತಿಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಇದೇ ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.