ಅಳಿವಿನಂಚಿನಲ್ಲಿರುವ 1 ಲಕ್ಷ ಕೋತಿಗಳಿಗೆ ಚೀನಾ ಬೇಡಿಕೆ: ರಫ್ತು ಮಾಡಲು ಶ್ರೀಲಂಕಾ ಸರ್ಕಾರ ಗ್ರೀನ್ ಸಿಗ್ನಲ್!
ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ಸರ್ಕಾರ ಇದೀಗ ತನ್ನ ಆರ್ಥಿಕ ಸಮಸ್ಯೆಗಳಿಂದ ಹೊರ ಬರಲು ಅಳಿವಿನಂಚಿನಲ್ಲಿರುವ ಕೋತಿ ಪ್ರಬೇಧವನ್ನು ಚೀನಾಗೆ ರಫ್ತು ಮಾಡಲು ಲಂಕಾ ಸರ್ಕಾರ ಮುಂದಾಗಿದೆ.
ಚೀನಾ ದೇಶವು 1 ಲಕ್ಷ ಕೋತಿಗಳ ಆಮದಿಗೆ ಬೇಡಿಕೆ ಇಟ್ಟಿದೆ ಎಂಬ ವಿಚಾರವನ್ನು ಶ್ರೀಲಂಕಾ ಸರ್ಕಾರ ದೃಢಪಡಿಸಿದೆ. ಅಷ್ಟೇ ಅಲ್ಲ, ಕೋತಿಗಳನ್ನು ರಫ್ತು ಮಾಡೋದಕ್ಕೂ ನಿರ್ಧರಿಸಿದೆ. ಚೀನಾ ದೇಶ ನೀಡಿರುವ ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ದೇಶಕ್ಕೆ ಡ್ರ್ಯಾಗನ್ ರಾಷ್ಟ್ರ ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಪರಿಸರವಾದಿಗಳ ತೀವ್ರ ಹೋರಾಟದ ನಡುವಲ್ಲೂ ಚೀನಾದ ಬೇಡಿಕೆಗೆ ಶ್ರೀಲಂಕಾ ಅಸ್ತು ಎಂದಿದೆ.
ಶ್ರೀಲಂಕಾದಿಂದ ಅಳಿವಿನಂಚಿನಲ್ಲಿರುವ 1 ಲಕ್ಷ ಟೋಕೆ ಮಕಾಖ್ ಕೋತಿಗಳನ್ನು ಆಮದು ಮಾಡಲು ಚೀನಾದಿಂದ ವಿನಂತಿಯೊಂದು ಬಂದಿದೆ ಎಂಬುದನ್ನು ಶ್ರೀಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ದೃಢೀಕರಿಸಿದ್ದಾರೆ. ಝೂಲಾಜಿಕಲ್ ಗಾರ್ಡನ್ಸ್ ಜೊತೆಗೆ ನಂಟು ಹೊಂದಿರುವ ಖಾಸಗಿ ಚೀನೀ ಕಂಪೆನಿ ಈ ವಿನಂತಿ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ. ಅಂತೆಯೇ ಮೃಗಾಲಯ ಹಾಗೂ ಪ್ರಾಣಿಗಳ ತಳಿ ಸಂವರ್ಧನೆ ನಡೆಸುವ ಚೀನಾದ ಖಾಸಗಿ ಸಂಸ್ಥೆ ಇದಾಗಿದ್ದು, ಈ ಸಂಸ್ಥೆ ತನಗೆ ಕೋತಿಗಳು ಬೇಕೆಂದು ಬೇಡಿಕೆ ಇಟ್ಟಿದೆ. ಅವರು ಕೋರಿದ ಒಂದು ಲಕ್ಷ ಕೋತಿಗಳನ್ನು ಒಮ್ಮೆಗೆ ಕಳುಹಿಸಲಾಗುವುದಿಲ್ಲ, ಆದರೆ ದೇಶದಲ್ಲಿ ಕೋತಿಗಳು ಉಂಟುಮಾಡುತ್ತಿರುವ ಬೆಳೆ ನಷ್ಟವನ್ನು ಪರಿಗಣಿಸಲಾಗುವುದು. ಸಂರಕ್ಷಿತ ಪ್ರದೇಶಗಳ ಕೋತಿಗಳನ್ನು ಕಳುಹಿಸಲಾಗುವುದಿಲ್ಲ, ಕೃಷಿ ಪ್ರದೇಶಗಳಲ್ಲಿ ಬೆಳೆ ಹಾನಿಗೆ ಕಾರಣವಾಗಿರುವ ಕೋತಿಗಳನ್ನು ಕಳುಹಿಸುವ ಬಗ್ಗೆ ಯೋಚಿಸಲಾಗುವುದು,” ಎಂದು ಅವರು ಹೇಳಿದ್ದಾರೆ.
ಬೆಳೆ ಹಾನಿಗೆ ಕಾರಣ ಆಗುತ್ತಿರುವ ಕೋತಿಗಳನ್ನು ಮಾತ್ರ ನಾವು ಹಿಡಿದು ಚೀನಾಗೆ ಕಳಿಸುತ್ತೇವೆ. ಶ್ರೀಲಂಕಾ ದೇಶದ ಹಲವೆಡೆ ಕೋತಿಗಳಿಂದ ಬೆಳೆ ಹಾನಿ ಆಗುತ್ತಿದೆ. ಈ ಪ್ರದೇಶಗಳಲ್ಲಿ ಮಾತ್ರ ಕೋತಿ ಹಿಡಿಯುತ್ತೇವೆ. ಆದ್ರೆ, ಸಂರಕ್ಷಿತ ಪ್ರದೇಶಗಳಲ್ಲಿ ಇರುವ ಕೋತಿಗಳನ್ನು ಹಾಗೆಯೇ ಬಿಡುತ್ತೇವೆ. ಕೃಷಿ ಚಟುವಟಿಕೆ ನಡೆಯುತ್ತಿರುವ ಪ್ರದೇಶಗಳಲ್ಲಿ ಮಾತ್ರ ನಾವು ಕೋತಿಗಳನ್ನು ಹಿಡಿಯಲು ಗಮನ ಹರಿಸುತ್ತೇವೆ ಎಂದು ಸಮರಸಿಂಘೆ ವಿವರಿಸಿದರು.