ಮಹಾರಾಷ್ಟ್ರದ ಅಕೋಲಾ ದೇವಸ್ಥಾನದ ಟಿನ್ ಶೆಡ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ: 7 ಮಂದಿ ಸಾವು, 23 ಜನರಿಗೆ ಗಾಯ
ಅಕೋಲಾ(ಮಹಾರಾಷ್ಟ್ರ): ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮತ್ತು ಮಳೆಯಿಂದಾಗಿ ದೇವಸ್ಥಾನದ ಆವರಣದಲ್ಲಿ ಜನರು ನಿಂತಿದ್ದ ಟಿನ್ ಶೆಡ್‌ನ ಮೇಲೆ ಮರವೊಂದು ಬಿದ್ದು ಏಳು ಜನರು ಮೃತಪಟ್ಟು 23 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ನಿನ್ನೆ ಭಾನುವಾರ ಸಂಜೆ 7.30ರ ಸುಮಾರಿಗೆ ಬಾಲಾಪುರ ತಾಲೂಕಿನ ಪಾರಸ್ ಗ್ರಾಮದ ಬಾಬುಜಿ ಮಹಾರಾಜರ ದೇವಸ್ಥಾನದಲ್ಲಿ ಮಹಾ ಆರತಿಗೆ ಜನರು ಸೇರಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅಕೋಲಾ ಜಿಲ್ಲಾಧಿಕಾರಿ ನಿಮಾ ಅರೋರಾ ತಿಳಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಲಿದೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ಸರ್ಕಾರದ ನಿಯಮಗಳ ಪ್ರಕಾರ ಆರ್ಥಿಕ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಗಾಳಿ ಮತ್ತು ಮಳೆಯಿಂದಾಗಿ 100 ವರ್ಷ ಹಳೆಯದಾದ ಮರವೊಂದು ಟಿನ್ ಶೆಡ್‌ನ ಮೇಲೆ ಬಿದ್ದಿದ್ದು, ಅದರ ಅಡಿಯಲ್ಲಿ ಸುಮಾರು 40 ಜನರು ನಿಂತಿದ್ದರು. ಮೃತಪಟ್ಟವರಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರಾಗಿದ್ದಾರೆ. 23 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಐವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.