₹15,000 ಮಾಸಿಕ ಗೌರವ ಧನಕ್ಕೆ ಆಗ್ರಹ: ಫ್ರೀಡಂಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ
ಬೆಂಗಳೂರು: ತಮ್ಮ ಮಾಸಿಕ ಗೌರವಧನವನ್ನು 15,000 ರೂಗಳಿಗೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಸಹಸ್ರಾರು ಆಶಾ ಕಾರ್ಯಕರ್ತೆಯರು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಸದ್ಯ ಇವರಿಗೆ ತಿಂಗಳಿಗೆ 5,000 ರೂಪಾಯಿ ಗೌರವಧನ ನೀಡಲಾಗುತ್ತಿದೆ.’ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ ಈ ಪ್ರತಿಭಟನೆಯನ್ನು ಆಯೋಜಿಸಿದೆ.
ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮಾತನಾಡಿ, ಸರ್ಕಾರವು ವೇತನ ಹೆಚ್ಚಿಸುವ ಬದಲು ಆಶಾ ಕಾರ್ಯಕರ್ತೆಯರನ್ನು “ಮನೆಗೆ ಕಳುಹಿಸಲು” (ಕೆಲಸದಿಂದ ತೆಗೆದುಹಾಕಲು) ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಒಂದೇ ರೀತಿಯಾಗಿವೆ. ಕೇಂದ್ರ ಸರ್ಕಾರ ಘೋಷಿಸಿದ್ದ 1,500 ರೂಪಾಯಿ ಹೆಚ್ಚಳವನ್ನೂ ಇನ್ನೂ ಜಾರಿಗೊಳಿಸಿಲ್ಲ ಎಂದು ತಿಳಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, ಸರ್ಕಾರವು ತಿಂಗಳಿಗೆ 10,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಆಶಾ ಕಾರ್ಯಕರ್ತೆಯರು 2025ರ ಜನವರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಸದುದ್ದೇಶದಿಂದ ಕೈಬಿಟ್ಟಿದ್ದರು. “ಆದರೆ ಇಂದಿಗೂ ಆ ಭರವಸೆ ಈಡೇರಿಲ್ಲ. ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು 10,000 ದಿಂದ 12,000 ರೂಪಾಯಿಗಳವರೆಗೆ ಗೌರವಧನ ನೀಡುತ್ತಿರುವಾಗ, ಕರ್ನಾಟಕಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.