ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ಉತ್ಥಾನ ದ್ವಾದಶಿಯಿ೦ದ ಲಕ್ಷದೀಪೋತ್ಸವ ಆರ೦ಭ.....ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಚಮನ್ ಮೀನಿನ ವಿಷಾನಿಲಕ್ಕೆ ಐವರು ಮೀನುಗಾರರು ಸಾವು; ಎಚ್ಚೆತ್ತ ಆಡಳಿತ, ಬಂದರುಗಳಲ್ಲಿ ಹೈ ಅಲರ್ಟ್

ಕಾರವಾರ: ನವೆಂಬರ್ 13: ಉತ್ತರ ಕನ್ನಡ ಜಿಲ್ಲೆಯಲ್ಲಿ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲ ಸೇವಿಸಿ ಐವರು ಮೀನುಗಾರರು ಮೃತಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಇಂತಹ ದುರ್ಘಟನೆಗಳು ಮತ್ತೆ ಸಂಭವಿಸದಂತೆ ಜಿಲ್ಲೆಯ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ವಿಶೇಷ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಮೀನುಗಾರರ ಜೀವ ರಕ್ಷಣೆಗೆ ಮೀನುಗಾರಿಕೆ ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಬೋಟ್ ಮಾಲೀಕರು ಮತ್ತು ಮೀನುಗಾರರು ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಚಮನ್ ಮೀನಿನ ವಿಷಾನಿಲಕ್ಕೆ ಐವರ ಬಲಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ವಾರಗಳ ಹಿಂದೆ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲಕ್ಕೆ ಐವರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದರು. ಅಕ್ಟೋಬರ್ 27ರಂದು ಗೋಕರ್ಣದ ತದಡಿ ಬಂದರಿನಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದರೆ, ಅಕ್ಟೋಬರ್ 31ರಂದು ಕಾರವಾರದ ಮುದುಗದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದರು. ಬೋಟ್‌ಗಳಲ್ಲಿ ಮೀನುಗಳನ್ನು ಸಂಗ್ರಹಿಸಿಟ್ಟಿದ್ದ ಸ್ಟೋರೇಜ್‌ನಿಂದ ಅವುಗಳನ್ನು ಹೊರತೆಗೆಯುವ ಸಂದರ್ಭದಲ್ಲಿ ಬಿಡುಗಡೆಯಾದ ವಿಷಕಾರಿ ಅನಿಲ ಸೇವನೆಯೇ ಈ ದುರಂತಗಳಿಗೆ ಕಾರಣವಾಗಿತ್ತು.

ಚಮನ್ ಮೀನು ಕೊಳೆತಾಗ ಅಮೋನಿಯಾ ಮತ್ತು ಹೈಡ್ರೋಜನ್ ಸಲ್ಫೈಡ್‌ನಂತಹ ಅಪಾಯಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಮುಚ್ಚಿದ ಟ್ಯಾಂಕ್‌ಗಳಲ್ಲಿ ಈ ಅನಿಲಗಳು ಸಂಗ್ರಹವಾಗುವುದರಿಂದ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿ ಪ್ರಾಣಾಪಾಯ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ, ಬೈತಖೋಲ್, ಹೊನ್ನಾವರ ಸೇರಿದಂತೆ ಜಿಲ್ಲೆಯ ವಿವಿಧ ಬಂದರುಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗಿದೆ.

ಮೀನುಗಾರರಿಗೆ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ!

ಮೀನುಗಾರರು ಚಮನ್ ಮೀನು ಹಿಡಿದ ತಕ್ಷಣ ಸೂಕ್ತ ರೀತಿಯಲ್ಲಿ ಶೀತಲೀಕರಣ ಮಾಡಬೇಕು. ಮೀನುಗಳನ್ನು ಶೀಘ್ರವಾಗಿ ಬಂದರಿಗೆ ಸಾಗಿಸಬೇಕು. ಕೊಳೆತ ಮೀನು ಅಥವಾ ತ್ಯಾಜ್ಯವನ್ನು ಬೋಟ್‌ಗಳಲ್ಲಿ ಸಂಗ್ರಹಿಸಿಡಬಾರದು. ಯಾವುದೇ ಕಾರಣಕ್ಕೂ ಮೀನು ಸಂಗ್ರಹಣಾ ಟ್ಯಾಂಕ್‌ಗಳ ಒಳಗೆ ನೇರವಾಗಿ ಇಳಿಯಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟ್ಯಾಂಕ್‌ಗಳ ಒಳಗೆ ಪ್ರವೇಶಿಸುವ ಮೊದಲು ಗ್ಯಾಸ್ ಡಿಟೆಕ್ಟರ್ ಮೂಲಕ ವಿಷಕಾರಿ ಅನಿಲಗಳ ಇರುವಿಕೆಯನ್ನು ಪರೀಕ್ಷಿಸಬೇಕು. ಸೂಕ್ತ ಗಾಳಿಯ ಸಂಚಾರ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು. ವಾಸನೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಸ್ಥಳ ಸುರಕ್ಷಿತವಾಗಿದೆ ಎಂದು ಭಾವಿಸಬಾರದು. ಉಸಿರಾಟದ ಸುರಕ್ಷತಾ ಸಾಧನಗಳಿಲ್ಲದೆ ಯಾರೂ ಒಳಗೆ ಪ್ರವೇಶಿಸಬಾರದು ಎಂದು ಸೂಚಿಸಲಾಗಿದೆ.

ಒಟ್ಟಿನಲ್ಲಿ ಐವರು ಮೀನುಗಾರರ ಸಾವಿನ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಇಂತಹ ದುರಂತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಿದೆ. ಮೀನುಗಾರರು ಮತ್ತು ಬೋಟ್ ಮಾಲೀಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಮಾಯಕ ಕಾರ್ಮಿಕರ ಜೀವ ಉಳಿಸುವುದು ಈಗ ಅತ್ಯಂತ ಅಗತ್ಯವಾಗಿದೆ.

No Comments

Leave A Comment