.....ದೇಶದೆಲ್ಲೆಡೆಯಲ್ಲಿ ಸ೦ಭ್ರಮದ ದೀಪಾವಳಿ ಹಬ್ಬ...ಗೂಡುದೀಪ,ಸಿಹಿತಿ೦ಡಿ,ಹೊಸಬಟ್ಟೆ
ಯ ಖರೀದಿಯಲ್ಲಿ ನಾಡಿನ ಜನತೆ-ಎಲ್ಲೆಡೆಯಲ್ಲಿ ಪಟಾಕಿಯ ಸದ್ದು.......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ,ಓದುಗರಿ ಬೆಳಕಿನ ಹಬ್ಬ ದೀಪಾವಳಿಯು ಶುಭವನ್ನು೦ಟುಮಾಡಲಿ ಎ೦ದು ಕರಾವಳಿಕಿರಣ ಡಾಟ್ ಶುಭವನ್ನು ಕೋರುತ್ತಿದೆ....
ಬೆಂಗಳೂರು: ಪತ್ನಿ ಸೇರಿದಂತೆ ಏಳು ಮಂದಿಯನ್ನು ಕೊಂದ ಆರೋಪ ಎದುರಿಸುತ್ತಿರುವ ಕ್ಯಾಬ್ ಚಾಲಕ ಅರ್ಜುನ್ ಇಂದುಶೇಖರ್ ಅಲಿಯಾಸ್ ಶೇಖರ್ ಯಾವುದೇ ಪಶ್ಚಾತ್ತಾಪದ ಲಕ್ಷಣ ತೋರಿಸುತ್ತಿಲ್ಲ. ನೋಡಲು ಸಾಮಾನ್ಯ ವ್ಯಕ್ತಿಯಂತೆ ಕಾಣುವ ಆತ ಅಸಹಜ ರೀತಿಯಲ್ಲಿ ಶಾಂತವಾಗಿದ್ದು, ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾನೆಂದು ತಿಳಿದುಬಂದಿದೆ.
2026ರ ಅಕ್ಟೋಬರ್ 16 ಮತ್ತು 31ರ ನಡುವೆ ನಡೆದ ಈ ಸರಣಿ ಹತ್ಯೆಗಳ ತನಿಖೆಗೆ ಆತ ಸಂಪೂರ್ಣವಾಗಿ ಸಹಕರಿಸುತ್ತಿದ್ದು, ಸಾಮಾನ್ಯ ವ್ಯಕ್ತಿಯಂತೆಯೇ ವರ್ತಿಸುತ್ತಿರುವುದು ಪೊಲೀಸರನ್ನೇ ಅಚ್ಚರಿಗೊಳಿಸಿದೆ.
ಶೇಖರ್ ತನ್ನ ಕೃತ್ಯಗಳನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ವಿಚಾರಣೆಗೆ ಸಹಕರಿಸುತ್ತಿದ್ದಾನೆ. ಏಳು ಮಂದಿಯನ್ನು ಕೊಂದಿದ್ದಕ್ಕೆ ಆತನಲ್ಲಿ ಯಾವುದೇ ಪಶ್ಚಾತ್ತಾಪ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಸರಣಿ ಹತ್ಯೆಗಳೇ ಆಘಾತಕಾರಿಯಾಗಿದ್ದು, ಶೇಖರ್ ಆರೋಪಿಗಳನ್ನು ಗುರಿಯಾಗಿಸಿಕೊಂಡು ಹತ್ಯೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ ರೀತಿ ಭಯಾನಕವಾಗಿದೆ.
ಅಕ್ಟೋಬರ್ 16ರಿಂದ 31ರವರೆಗಿನ ಎರಡು ವಾರಗಳ ಅವಧಿಯಲ್ಲಿ ಆತ ಪತ್ನಿ ಸುನೀತಾ (40), ಅತ್ತೆ ರೂಪಾವತಿ (65), ಭಾವಂದಿರಾದ ಶಿವಕುಮಾರ್ (30), ಶಂಕರ್ (44), ಅವರ ಪತ್ನಿಯರಾದ ದಿವ್ಯಾ (30), ನಳಿನಿ (29) ಹಾಗೂ ಶಿವಕುಮಾರ್ ಅವರ ಏಳು ವರ್ಷದ ಮಗ ಪುನೀತ್ನನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪದ ಎರಡು ಅಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿರುವ ಸುಮಾರು 500 ಚದರ ಅಡಿ ವಿಸ್ತೀರ್ಣದ ಮನೆಯಲ್ಲಿ ಈ ಹತ್ಯೆಗಳು ನಡೆದಿವೆ ಎನ್ನಲಾಗಿದೆ. ಮನೆಯ ಹಾಲ್ ಅಥವಾ ಹೊರಭಾಗದ ಶೌಚಗೃಹದಲ್ಲಿ ಕೊಲೆಗಳು ನಡೆದಿರುವ ಶಂಕೆಯಿದೆ.
ಪತ್ನಿಯನ್ನು ಹತ್ಯೆ ಮಾಡಿದ ಬಳಿಕ, ಇಂದುಶೇಖರ್ ತನ್ನ ಬಾಮೈದಂದಿರು ಮತ್ತು ಅವರ ಕುಟುಂಬಸ್ಥರನ್ನು ಊಟದ ನೆಪದಲ್ಲಿ ಬೇರೆ ಬೇರೆ ದಿನಗಳಂದು ಮನೆಗೆ ಕರೆಸಿಕೊಂಡಿದ್ದು, ಊಟ ಹಾಗೂ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿ, ಅವರು ಗಾಢ ನಿದ್ರೆಗೆ ಜಾರಿದ ನಂತರ ರುಬ್ಬುವ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಸಾಕ್ಷ್ಯ ನಾಶಪಡಿಸಲು ಆರೋಪಿ ಮತ್ತು ಆತನ ಅಪ್ರಾಪ್ತ ಪುತ್ರಿ ರಾಸಾಯನಿಕಗಳನ್ನು ಬಳಸಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದರೂ, ವಿಧಿವಿಜ್ಞಾನ ತಜ್ಞರು ಮನೆಯಲ್ಲಿ ರಕ್ತದ ಕುರುಹುಗಳನ್ನು ಪತ್ತೆಹಚ್ಚಿದ್ದಾರೆ.
ಶೇಖರ್ ತನಿಖೆಗೆ ಸಹಕರಿಸುತ್ತಿದ್ದಾನೆ ಎನ್ನಲಾಗಿದ್ದರೂ, ಆತ ನೀಡುತ್ತಿರುವ ಹೇಳಿಕೆಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಆಸ್ತಿ ವಿವಾದ, ಹಳೆಯ ದ್ವೇಷ ಸೇರಿದಂತೆ ಹತ್ಯೆಗಳ ಹಿಂದಿನ ಎಲ್ಲ ಆಯಾಮಗಳು ಮತ್ತು ಕಾರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ವೈವಾಹಿಕ ಕಲಹಕ್ಕೆ ಪತ್ನಿಯೇ ಕಾರಣ ಎಂದು ಶೇಖರ್ ಆರೋಪಿಸುತ್ತಿದ್ದಾನೆ ಎನ್ನಲಾಗಿದೆ.
ಮನೆಗೆ ಸಾಕಷ್ಟು ಹಣ ತರುತ್ತಿಲ್ಲ ಎಂದು ಪತ್ನಿ ಆಗಾಗ್ಗೆ ಅವಮಾನಿಸುತ್ತಿದ್ದಳು ಹಾಗೂ ವಿವಾಹೇತರ ಸಂಬಂಧಗಳ ವಿಚಾರ ಮುಂದಿಟ್ಟು ಭಾವನಾತ್ಮಕವಾಗಿ ಒತ್ತಡ ಹೇರುತ್ತಿದ್ದಳು ಎಂದು ಆತ ಹೇಳಿಕೊಂಡಿದ್ದಾನೆ. ಇದರಿಂದ ತನ್ನಲ್ಲಿ ಕೋಪ ಮತ್ತು ಸೇಡಿನ ಭಾವನೆ ಹೆಚ್ಚಾಗಿತ್ತು ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ದಂಪತಿ ನಡುವಿನ ವಯಸ್ಸಿನ ಅಂತರವೂ ಆತನಲ್ಲಿ ಅಭದ್ರತೆಯನ್ನು ಹೆಚ್ಚಿಸಿರಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಮೃತ ಪತ್ನಿಗೆ ವಿವಾಹೇತರ ಸಂಬಂಧಗಳಿದ್ದವು ಎಂಬ ಆತನ ಆರೋಪಕ್ಕೆ ಈವರೆಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ.
ಪೊಲೀಸರು ಏಳು ಮೃತದೇಹಗಳನ್ನೂ ಪತ್ತೆಹಚ್ಚಿದ್ದಾರೆ. ಕೊನೆಯದಾಗಿ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳು ಸೋಮವಾರ ಹಾಸನ ಜಿಲ್ಲೆಯ ಶಿರಾಡಿ ಘಾಟ್ನಲ್ಲಿ ಪತ್ತೆಯಾಗಿದ್ದವು.
ಪೂರ್ವಯೋಜಿತ ಹತ್ಯೆ ಸಾಧ್ಯತೆ
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಯ ಆಧಾರದ ಮೇಲೆ ನೋಡುವುದಾದರೆ, ಈ ಹತ್ಯೆಗಳಲ್ಲಿ ನಿರ್ದಿಷ್ಟ ಮಟ್ಟದ ಯೋಜನೆ ಮತ್ತು ಸಂಘಟಿತ ಕಾರ್ಯವೈಖರಿ ಕಂಡುಬರುತ್ತಿದೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ವಿಧಿವಿಜ್ಞಾನ ಮನೋವೈದ್ಯಕೀಯ ಘಟಕದ ಮುಖ್ಯಸ್ಥ ಡಾ. ಸುರೇಶ್ ಬಡಾ ಮಠ್ ಹೇಳಿದ್ದಾರೆ.
ಬಲಿಪಶುಗಳ ಆಯ್ಕೆ, ಹತ್ಯೆಗಳಿಗೆ ಅನುಸರಿಸಿದ ಕ್ರಮ, ವಿವಿಧ ಸ್ಥಳಗಳಲ್ಲಿ ಮೃತದೇಹಗಳನ್ನು ವಿಲೇವಾರಿ ಮಾಡಿರುವುದು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಲು ನಡೆಸಿದ ಪ್ರಯತ್ನಗಳು ತನಿಖೆಯಲ್ಲಿ ಸಾಬೀತಾದರೆ, ಈ ಕೃತ್ಯಗಳು ಪೂರ್ವಯೋಜಿತವಾಗಿದ್ದವು ಮತ್ತು ನಿರ್ದಿಷ್ಟ ಉದ್ದೇಶದಿಂದ ನಡೆದಿದ್ದವು ಎಂಬುದನ್ನು ಸೂಚಿಸಬಹುದ ಎಂದು ಅವರು ತಿಳಿಸಿದ್ದಾರೆ.
ವರದಿಯಾಗಿರುವ ಘಟನೆಗಳು ದೀರ್ಘಕಾಲದ ವೈಯಕ್ತಿಕ ದ್ವೇಷದಿಂದ ಪ್ರೇರಿತವಾದ ಪ್ರತೀಕಾರದ ಹಿಂಸಾಚಾರದ ಸ್ವರೂಪ ಮತ್ತು ತೀವ್ರತೆಯ ಬಗ್ಗೆ ಗಂಭೀರ ಆತಂಕ ಮೂಡಿಸುತ್ತವೆ. ಆದರೆ, ಆರೋಪಿಯ ಮಾನಸಿಕ ಸ್ಥಿತಿಯ ಬಗ್ಗೆ ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ. ನಾವು ಆತನನ್ನು ವೈಯಕ್ತಿಕವಾಗಿ ಪರೀಕ್ಷಿಸಿಲ್ಲ. ಆತನ ವೈದ್ಯಕೀಯ ದಾಖಲೆಗಳು, ವಿಧಿವಿಜ್ಞಾನ ಸಾಕ್ಷ್ಯಗಳು ಅಥವಾ ಇತರ ಹಿನ್ನೆಲೆ ಮಾಹಿತಿಯೂ ನಮ್ಮ ಬಳಿ ಇಲ್ಲ.
ಆರೋಪಿಯ ಮಾನಸಿಕ ಆರೋಗ್ಯ, ಕೃತ್ಯ ನಡೆದ ಸಮಯದಲ್ಲಿನ ಮಾನಸಿಕ ಸ್ಥಿತಿ ಅಥವಾ ಅಪರಾಧದ ಹೊಣೆಗಾರಿಕೆಯ ಬಗ್ಗೆ ಅಭಿಪ್ರಾಯ ನೀಡಲು ಸಮಗ್ರ ವಿಧಿವಿಜ್ಞಾನ ಮನೋವೈದ್ಯಕೀಯ ಮೌಲ್ಯಮಾಪನ ಅಗತ್ಯ. ಅಲ್ಲಿಯವರೆಗೆ ಆತನ ಮಾನಸಿಕ ಸ್ಥಿತಿಯ ಕುರಿತ ಯಾವುದೇ ವಿಶ್ಲೇಷಣೆಯನ್ನು ತಾತ್ಕಾಲಿಕವಾಗಿಯೇ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ಶೇಖರ್ನ ಅಪ್ರಾಪ್ತ ಪುತ್ರಿಯೂ ನೆರವಾಗಿದ್ದಾಳೆ ಎಂಬ ವರದಿಯೂ ಕಳವಳಕಾರಿಯಾಗಿದೆ. ಈ ವಿಚಾರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಿದೆ ಎಂದು ಡಾ. ಬಡಾ ಮಠ್ ಅಭಿಪ್ರಾಯಪಟ್ಟಿದ್ದಾರೆ.
ಆಕೆ ಭಾಗಿಯಾಗಿದ್ದಾಳೆ ಎನ್ನಲಾದ ಸಂಗತಿಯನ್ನೇ ಅಪರಾಧದ ಉದ್ದೇಶ ಅಥವಾ ಮಾನಸಿಕ ಅಸ್ವಸ್ಥತೆಯ ಪುರಾವೆ ಎಂದು ಪರಿಗಣಿಸಬಾರದು. ಆಕೆಯ ವಯಸ್ಸು, ಪ್ರಬುದ್ಧತೆಯ ಮಟ್ಟ, ಘಟನೆಗಳ ಬಗ್ಗೆ ಅರಿವು, ತಂದೆಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿದ್ದಳೇ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದಳೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ ಎಂದು ವಿವರಿಸಿದ್ದಾರೆ.