ಉಡುಪಿ: ರಸ್ತೆ ಅಪಘಾತದಲ್ಲಿ ಆರ್ಎಸ್ಎಸ್ ಮುಖಂಡ ಸಾವು!....ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ 'ಅರ್ನಾಬ್' ಚಂಡಮಾರುತ, ತೀವ್ರ ಸ್ವರೂಪ, 3 ದಿನ ಮಳೆ ಸಾಧ್ಯತೆ IMD...
Hormuzನಲ್ಲಿ ತೈಲ ಟ್ಯಾಂಕರ್ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು
ದುಬೈ: ಹಾರ್ಮುಜ್ ಜಲಸಂಧಿಯಲ್ಲಿ 27 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಪನಾಮ ಧ್ವಜದ ಕಚ್ಚಾ ತೈಲ ಟ್ಯಾಂಕರ್ ‘ಎಂ.ಟಿ ಲೂಯಿಸ್ 1’ ಮೇಲೆ ಲಿಂಪೆಟ್ ಮೈನ್ಗಳ ಮೂಲಕ ದಾಳಿ ನಡೆಸಲಾಗಿದೆ. ಆದರೆ ಹಡಗಿನಲ್ಲಿದ್ದ ಎಲ್ಲಾ 27 ಭಾರತೀಯ ನಾವಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ.
ಫೆಬ್ರವರಿಯಲ್ಲಿ ಅಮೆರಿಕ-ಇರಾನ್ ಸಂಘರ್ಷ ಆರಂಭವಾದ ಬಳಿಕ ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ಲಿಂಪೆಟ್ ಮೈನ್ ಬಳಸಿ ದಾಳಿ ನಡೆಸಿದ ಮೊದಲ ಘಟನೆ ಇದಾಗಿದೆ ಎಂದು ವರದಿಯಾಗಿದೆ.
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಟ್ಯಾಂಕರ್ನಲ್ಲಿದ್ದ ಎಲ್ಲ 27 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಾವಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹಡಗಿನ ನಿರ್ವಹಣಾ ಕಂಪನಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.
ರಾಯಿಟರ್ಸ್ ಉಲ್ಲೇಖಿಸಿರುವ ಕಡಲ ಭದ್ರತಾ ಮೂಲಗಳ ಪ್ರಕಾರ, ಸಣ್ಣ ದೋಣಿಯೊಂದು ಟ್ಯಾಂಕರ್ ಸಮೀಪಕ್ಕೆ ಬಂದು ಹಡಗಿನ ಹೊರಭಾಗಕ್ಕೆ ಎರಡು ಲಿಂಪೆಟ್ ಮೈನ್ಗಳನ್ನು ಅಳವಡಿಸಿ ಅಲ್ಲಿಂದ ತೆರಳಿದೆ. ಬಳಿಕ ಸಂಭವಿಸಿದ ಸ್ಫೋಟಗಳಿಂದ ಎಂಜಿನ್ ಕೊಠಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಬಳಿಕ ಹಡಗಿನ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪರಿಸರ ಹಾನಿ ಸಂಭವಿಸಿಲ್ಲ. ಬಳಿಕ ಟ್ಯಾಂಕರ್ ಮತ್ತೆ ತನ್ನ ಪ್ರಯಾಣವನ್ನು ಮುಂದುವರಿಸಿ, ಮುಂದಿನ ಬಂದರಿನತ್ತ ಸಾಗಿದೆ ಎಂದು ತಿಳಿದುಬಂದಿದೆ.
ಓಮನ್ನ ಖಸಾಬ್ನಿಂದ ಸುಮಾರು 25 ನಾಟಿಕಲ್ ಮೈಲು (46 ಕಿ.ಮೀ.) ಈಶಾನ್ಯ ಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ತಿಳಿಸಿದೆ.
ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದು, ಬೆಂಕಿಯನ್ನು ನಂದಿಸಲಾಗಿದೆ ಮತ್ತು ಹಡಗು ಪ್ರಯಾಣ ಮುಂದುವರಿಸಿದೆ ಎಂದು ಸಂಸ್ಥೆ ದೃಢಪಡಿಸಿದೆ.
UKMTO ಹಡಗಿನ ಹೆಸರನ್ನು ಬಹಿರಂಗಪಡಿಸದಿದ್ದರೂ, ಮೂರು ಕಡಲ ಭದ್ರತಾ ಮೂಲಗಳು ದಾಳಿಗೊಳಗಾದ ಹಡಗು MT LOUISE 1 ಎಂದು ಗುರುತಿಸಿವೆ.
ಅಕ್ಟೋಬರ್ 29ರಂದು ಮತ್ತೊಂದು ಹಡಗಿನ ಮೇಲೂ ದಾಳಿ ನಡೆದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಲೈಬೀರಿಯಾ ಧ್ವಜ ಹೊಂದಿದ್ದ, ಇಬ್ಬರು ಭಾರತೀಯರನ್ನು ಒಳಗೊಂಡಿದ್ದ ಬೃಹತ್ ಕಚ್ಚಾ ತೈಲ ಸಾಗಣೆ ಹಡಗು MT ARZANAH ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ಉತ್ಕ್ಷೇಪಕ ದಾಳಿ ನಡೆದಿತ್ತು.
ಈ ಎರಡೂ ಹಡಗುಗಳಲ್ಲಿದ್ದ ಒಟ್ಟು 29 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ ಎಂದು ಸಚಿವ ಸೋನೋವಾಲ್ ತಿಳಿಸಿದ್ದಾರೆ.
MT LOUISE 1 ಮೇಲಿನ ದಾಳಿಯ ಹಿಂದಿರುವವರನ್ನು ಇನ್ನೂ ಗುರುತಿಸಲಾಗಿಲ್ಲ. ಸೆಪ್ಟೆಂಬರ್ನಲ್ಲಿಯೂ ಇದೇ ರೀತಿಯ ಸ್ಫೋಟಕಗಳನ್ನು ಬಳಸುವ ಪ್ರಯತ್ನ ನಡೆದಿತ್ತು. ಆದರೆ, ಅವು ಸ್ಫೋಟಗೊಳ್ಳದ ಕಾರಣ ಆ ಪ್ರಯತ್ನ ವಿಫಲವಾಗಿತ್ತು ಎಂದು ಕಡಲ ಭದ್ರತಾ ಮೂಲಗಳು ತಿಳಿಸಿವೆ.
ಇತ್ತೀಚಿನ ದಾಳಿಯು ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸುರಕ್ಷತೆಯ ಬಗ್ಗೆ ಮತ್ತಷ್ಟು ಆತಂಕ ಹೆಚ್ಚಿಸಿದೆ. ಜಾಗತಿಕ ಇಂಧನ ಪೂರೈಕೆಯ ದೃಷ್ಟಿಯಿಂದ ಈ ಜಲಮಾರ್ಗ ಅತ್ಯಂತ ಮಹತ್ವದ್ದಾಗಿದೆ.
ಲಿಂಪೆಟ್ ಮೈನ್ಗಳು ಹಡಗಿನ ಹೊರಭಾಗಕ್ಕೆ ಅಂಟಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ಕಾಂತೀಯ ಸ್ಫೋಟಕ ಸಾಧನಗಳಾಗಿವೆ. ಇವುಗಳನ್ನು ಸಾಮಾನ್ಯವಾಗಿ ಮುಳುಗು ತಜ್ಞರು ಅಥವಾ ಸಣ್ಣ ದೋಣಿಗಳಲ್ಲಿರುವವರು ಹಡಗಿನ ತಳಭಾಗಕ್ಕೆ ಅಳವಡಿಸಬಹುದು. ಸುಲಭವಾಗಿ ಅಳವಡಿಸುವ ಸಾಧ್ಯತೆಯಿಂದಾಗಿ, ವಿಶೇಷವಾಗಿ ಜನನಿಬಿಡ ಸಮುದ್ರ ಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಇವು ಅಪಾಯಕಾರಿಯಾಗಿವೆ.
ಗ್ರೀಸ್ ಮೂಲದ ಕಡಲ ಅಪಾಯ ನಿರ್ವಹಣಾ ಸಂಸ್ಥೆ ಮಾರಿಸ್ಕ್ಸ್ ಪ್ರಕಾರ, ಚಲಿಸುತ್ತಿರುವ ತೈಲ ಟ್ಯಾಂಕರ್ ಸಮೀಪಕ್ಕೆ ಸಣ್ಣ ದೋಣಿಯೊಂದು ತೆರಳಿ, ಸ್ಫೋಟಕಗಳನ್ನು ಅಳವಡಿಸಿ ಅಲ್ಲಿಂದ ಸುರಕ್ಷಿತವಾಗಿ ಹಿಂದಿರುಗುತ್ತಿರುವುದು ಕಡಲ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿಂದೆಯೂ ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ವಿರುದ್ಧ ಲಿಂಪೆಟ್ ಮೈನ್ಗಳನ್ನು ಬಳಸಿದ ಘಟನೆಗಳು ನಡೆದಿವೆ ಎಂದು ಸಂಸ್ಥೆ ತಿಳಿಸಿದೆ.
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗಗಳಲ್ಲಿ ಇದೂ ಒಂದಾಗಿದೆ. ಫೆಬ್ರವರಿಯಲ್ಲಿ ಅಮೆರಿಕ-ಇರಾನ್ ಸಂಘರ್ಷ ಆರಂಭವಾದ ಬಳಿಕ ಈ ಜಲಮಾರ್ಗದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು ಹಾಗೂ ಭದ್ರತಾ ಘಟನೆಗಳ ಆತಂಕವನ್ನು ಇದೀಗ ಮತ್ತಷ್ಟು ಹೆಚ್ಚಿಸಿವೆ.