ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ಉತ್ಥಾನ ದ್ವಾದಶಿಯಿ೦ದ ಲಕ್ಷದೀಪೋತ್ಸವ ಆರ೦ಭ.....ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟ : ಸೇತುವೆಯಿಂದ ಕೆಳಕ್ಕೆ ಬಿದ್ದು ಬೆಂಕಿಗಾಹುತಿಯಾದ ಕಾರು – 4 ಮಂದಿ ಸಾವು

ಧಾರ:ಅ.26.ದೇವಸ್ಥಾನದಲ್ಲಿ ದರ್ಶನ ಪಡೆದು ಮನೆಗೆ ಮರಳುತ್ತಿದ್ದ ಐವರು ಸ್ನೇಹಿತರಿದ್ದ ಕಾರು ಭೀಕರ ಅಪಘಾತಕ್ಕೀಡಾಗಿ ನಾಲ್ವರು ಯುವಕರು ಸಜೀವ ದಹನಗೊಂಡಿರುವ ದಾರುಣ ಘಟನೆ ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ ನಡೆದಿದೆ.

ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ವಾಹನ ಸೇತುವೆಯಿಂದ ಕೆಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರಿನಿಂದ ಹೊರಗೆ ಬಿದ್ದಿದ್ದ ಮತ್ತೊಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಗಂಭೀರವಾಗಿ ಗಾಯಗೊಂಡಿದ್ದಾನೆ.

ಭಾನುವಾರ ತಡರಾತ್ರಿ ಸುಮಾರು 11.14ರಿಂದ 11.30ರ ನಡುವೆ ಸಾದಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲೇಬಡ್–ನಾಯಗಾಂವ್ ಹಾಗೂ ಮೌ–ನೀಮಚ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀರಾ ಧಾಬಾ ಮತ್ತು ಸಂಗೇಶರ ಸಮೀಪದ ಸೇತುವೆಯ ಬಳಿ ಈ ಅಪಘಾತ ಸಂಭವಿಸಿದೆ.

ಸಾಂಗೋರ್ ಗ್ರಾಮದ ಐವರು ಯುವಕರು ಸಾಂವರಿಯಾ ಸೇಠ್ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಸ್ವಿಫ್ಟ್ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಸೇತುವೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಕಾರಿನ ಚಾಲಕನ ಬದಿಯ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಕಾರು ಸೇತುವೆಯ ಬಳಿ ತಗ್ಗಿಗೆ ಬಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕ್ಷಿಪ್ರವಾಗಿ ಇಡೀ ಕಾರನ್ನು ಆವರಿಸಿದ್ದರಿಂದ ಒಳಗಿದ್ದ ಯುವಕರಿಗೆ ಹೊರಬರಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಈ ಭೀಕರ ಅಪಘಾತದಲ್ಲಿ ಭೀಮ್ ಢಾಕಡ್ (24), ಆದಿತ್ಯ ತಿವಾರಿ (22), ಚೇತನ್ ಢಾಕಡ್ (21) ಮತ್ತು ಅಭಿಷೇಕ್ ಸೋಲಂಕಿ (19) ಮೃತಪಟ್ಟಿದ್ದಾರೆ. ನಾಲ್ವರೂ ಸಾಂಗೋರ್ ಗ್ರಾಮದ ನಿವಾಸಿಗಳಾಗಿದ್ದು, ಕಾರಿನೊಳಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಬಳಿಕ ಕಾರಿನೊಳಗಿದ್ದ ನಾಲ್ವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಧಾರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.

ಕಾರಿನಲ್ಲಿದ್ದ ತುಷಾರ್ ಮುಖೇಶ್ ಮಂಡ್ಲೋಯಿ (20) ಅಪಘಾತದ ರಭಸಕ್ಕೆ ಹೊರಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಆತನಿಗೆ ಶೇ. 35ರಿಂದ 40ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುವಿಗೆ ಧಾರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ರವಾನಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರೂ ಕಾರು ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಧಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಾರುಲ್ ಬೇಲಾಪುರ್ಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅವರ ನಿರ್ದೇಶನದಂತೆ ಸಾದಲ್‌ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಟೈರ್ ಸ್ಫೋಟಗೊಂಡ ನಿಖರ ಕಾರಣ ಮತ್ತು ಅಪಘಾತದ ಇತರ ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ.

No Comments

Leave A Comment