ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರ ಸಾವು, 8 ಮಂದಿಗೆ ಗಾಯ
ರಿಯಾದ್: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿರುವ ಕಿಂಗ್ ಫಹದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬುಧವಾರ ತಡರಾತ್ರಿ ಭೀಕರ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಭಾರತೀಯ ನಾಗರಿಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಭಾರತೀಯರು ಸೇರಿ ಎಂಟು ಜನರು ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಬುಧವಾರ ತಡರಾತ್ರಿ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯ ತೀವ್ರತೆಗೆ ವಿಮಾನ ನಿಲ್ದಾಣದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ತಕ್ಷಣವೇ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿ, ಬೇರೆಡೆಗೆ ತಿರುಗಿಸಲಾಗಿತ್ತು. ದಾಳಿಯಲ್ಲಿ ಓರ್ವ ಸೌದಿ ಪ್ರಜೆ ಹಾಗೂ ಓರ್ವ ಭಾರತೀಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತವಾಗಿ ಖಚಿತಪಡಿಸಿದೆ.
ಈ ನಡುವೆ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜೊತೆಗೆ, ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಇರಾನ್ ಬೆಂಬಲಿತ ಯೆಮನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ದಾಳಿಯಲ್ಲಿ ಮೃತಪಟ್ಟ ಮತ್ತೊಬ್ಬರು ಸೌದಿ ಅರೇಬಿಯಾದ ಪ್ರಜೆಯಾಗಿದ್ದಾರೆ. ಬುಧವಾರ ತಡರಾತ್ರಿ ನಡೆದ ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ವಿಮಾನ ನಿಲ್ದಾಣದ ಕೆಲವು ಭಾಗಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ.
ಜಾಗತಿಕ ವಿಮಾನಗಳ ಸಂಚಾರದ ಮಾಹಿತಿ ನೀಡುವ ಫ್ಲೈಟ್‌ರಾಡಾರ್24, ವಿಮಾನಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದೆ.
ಇದೇ ವೇಳೆ, ಸೌದಿ ಅರೇಬಿಯಾದ ಶೈಬಾ ತೈಲಕ್ಷೇತ್ರದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಮತ್ತೊಬ್ಬ ಭಾರತೀಯ ಪ್ರಜೆ ಗಾಯಗೊಂಡಿದ್ದು, ಅವರಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಸೌದಿ ಅರೇಬಿಯಾದ ಇಂಧನ ಸಚಿವಾಲಯದ ಪ್ರಕಾರ, ಬುಧವಾರ ಬೆಳಿಗ್ಗೆ ಸೌದಿ ಅರಾಮ್ಕೊದ ಶೈಬಾ ತೈಲಕ್ಷೇತ್ರದಲ್ಲಿರುವ ಒಂದು ಸೌಲಭ್ಯವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲು ಯತ್ನಿಸಲಾಗಿದೆ. ಈ ವೇಳೆ ವಾಯು ರಕ್ಷಣಾ ವ್ಯವಸ್ಥೆಯು ಡ್ರೋನ್ ಅನ್ನು ತಡೆದಿದೆ ಎಂದು ತಿಳಿಸಿದೆ.