ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಬ್ಯಾಂಡೇಜ್ ಧರಿಸಿರುವ ನಟನ ಫಸ್ಟ್ ಇಮೇಜ್; ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿನ್ನೆ ರಾತ್ರಿ ನಟನ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.
ನಂತರ ಏಕನಾಥ್ ಶಿಂಧೆ ಸುದ್ದಿಗಾರರೊಂದಿಗೆ ಮಾತನಾಡಿ, ಗುಂಡಿನ ಸಿಡಿಮದ್ದುಗಳಿಂದ ಹಾಗೂ ಗಾಜಿನ ಚೂರುಗಳಿಂದ ಟೈಗರ್ ಅವರ ಕೈಗೆ ಗಾಯಗಳಾಗಿವೆ. ನಟ ಹಾಗೂ ಅವರ ಕುಟುಂಬದ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಇದು ಗಂಭೀರ ಘಟನೆಯಾಗಿದೆ. ಐದು ಸುತ್ತು ಗುಂಡು ಹಾರಿಸಲಾಗಿದೆ. ಆದರೆ ಅದೃಷ್ಟವಶಾತ್ ಸುರಕ್ಷಿತವಾಗಿದ್ದಾರೆ. ಅವರ ಕಾರು ಚಾಲಕನಿಗೆ ಗಾಯಗಳಾಗಿವೆ. ಈ ಘಟನೆ ಖಂಡನಾರ್ಹ ಎಂದರು.
ಸಾರ್ವಜನಿಕ ವ್ಯಕ್ತಿಗಳಿಗೆ ಬಹಿರಂಗವಾಗಿ ಬೆದರಿಕೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
1990ರ ದಶಕದಲ್ಲಿ ಇಂತಹ ಗ್ಯಾಂಗ್ವಾರ್ಗಳು ಸಾಮಾನ್ಯವಾಗಿದ್ದವು. 1995ರಲ್ಲಿ ಮುಂಬೈ ಪೊಲೀಸರು ಅವುಗಳಿಗೆ ಅಂತ್ಯ ಹಾಡಿದ್ದರು. ಜನರನ್ನು ಬೆದರಿಸುವ ಇಂತಹ ಪ್ರಯತ್ನಗಳನ್ನು ಸಹಿಸುವುದಿಲ್ಲ. ಈ ಗೂಂಡಾಗಿರಿಗೆ ನಾವು ಅಂತ್ಯ ಹಾಡುತ್ತೇವೆ ಎಂದು ಹೇಳಿದರು.
ಮುಂಬೈ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಮೋಹಿತ್ ಗರ್ಗ್ ಅವರ ಪ್ರಕಾರ, ನಿನ್ನೆ ಭಾನುವಾರ ಸಂಜೆ ಸುಮಾರು 7 ಗಂಟೆಗೆ ಟೈಗರ್ ಶ್ರಾಫ್ ಫುಟ್ಬಾಲ್ ಕ್ಲಬ್ನಿಂದ ಹೊರಬರುತ್ತಿದ್ದಾಗ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಟ ಕೂದಲೆಳೆಯ ಅಂತರದಲ್ಲಿ ಗಾಯಗೊಂಡು ಪಾರಾಗಿದ್ದಾರೆ.
ಘಟನೆಯಲ್ಲಿ ನಟನ ಕಾರು ಚಾಲಕ ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ. ಚಾಲಕನಿಗೆ ಗುಂಡು ತಗುಲಿದ್ದು, ನಟನಿಗೆ ಗುಂಡೇಟಿನಿಂದ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಜುಹು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.
ಗುಂಡಿನ ದಾಳಿಯ ಸುದ್ದಿ ಹೊರಬಿದ್ದ ಬಳಿಕ, ಟೈಗರ್ ಶ್ರಾಫ್ ಅವರ ಸ್ನೇಹಿತೆ ಹಾಗೂ ನಟಿ ದಿಶಾ ಪಟಾನಿ ಕೂಡ ತಡರಾತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಈ ಘಟನೆಯು ಮುಂಬೈನಲ್ಲಿ ಸಾರ್ವಜನಿಕ ವ್ಯಕ್ತಿಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಗುಂಡಿನ ದಾಳಿಯ ಹಿಂದಿನ ಕಾರಣಗಳು ಮತ್ತು ಆರೋಪಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ನಟ ಹಾಗೂ ಅವರ ಕುಟುಂಬಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.