..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ವರ್ಷ125ನೇ ವರ್ಷದ ಸಂಭ್ರಮಾಚರಣೆಗೆ ಕರಸೇವೆಯ ಮೂಲಕ ಗಾಂಧಿ ಜಯಂತಿ ಆಚರಣೆಯೊಂದಿಗೆ ಶುಕ್ರವಾರ ಚಾಲನೆ ನೀಡಲಾಯಿತು....

2006ರ KSTP ಯೋಜನೆ ಪ್ರಕರಣ: CEC ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳಂ ಗೃಹ ಸಚಿವ ಆದೇಶ

ತಿರುವನಂತಪುರಂ: ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2006ರಲ್ಲಿ ಕೇರಳದ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಕೆಎಸ್‌ಟಿಪಿ ರಸ್ತೆ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳು ಹಾಗೂ ಈ ಯೋಜನೆಗೆ ಸಂಬಂಧಿಸಿದ್ದ ಮಲೇಷ್ಯಾ ಮೂಲದ ಸಿವಿಲ್ ಎಂಜಿನಿಯರ್ ಸಾವಿನ ಪ್ರಕರಣ ಕುರಿತು ಪ್ರಾಥಮಿಕ ಭ್ರಷ್ಟಾಚಾರ ನಿಗ್ರಹ ತನಿಖೆಗೆ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶ ಹೊರಡಿಸಿದ್ದಾರೆ.

2006ರಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದಿದ್ದ ಪ್ರಾಥಮಿಕ ವಿಜಿಲೆನ್ಸ್ ವಿಚಾರಣೆಗೆ ಸಂಬಂಧಿಸಿದ ಕಡತಗಳನ್ನು ಕೇರಳ ಗೃಹ ಇಲಾಖೆ ಇತ್ತೀಚೆಗೆ ಕೋರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಕೆಪಿಸಿಸಿ ನಾಯಕ ಮಲಯಿಂಕೀಝು ವೇಣುಗೋಪಾಲ್ ದೂರು ಸಲ್ಲಿಸಿದ ಬಳಿಕ ಚೆನ್ನಿತ್ತಲ ಅವರು ಹೊಸದಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಜ್ಞಾನೇಶ್ ಕುಮಾರ್ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಮೊದಲು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (VACB) ಪ್ರಾಥಮಿಕ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚೆನ್ನಿತ್ತಲ, ತಾವು ದೂರನ್ನು ಪರಿಶೀಲಿಸಿದ್ದು, ಆರೋಪಗಳಲ್ಲಿ ಮೇಲ್ನೋಟಕ್ಕೆ (prima facie) ಸತ್ಯಾಂಶ ಕಂಡುಬಂದಿದೆ ಎಂದು ಹೇಳಿದರು.

ವಿಸ್ತೃತ ಭ್ರಷ್ಟಾಚಾರ ನಿಗ್ರಹ ತನಿಖೆ ಅತ್ಯಗತ್ಯ ಎಂಬ ತೀರ್ಮಾನಕ್ಕೆ ಬಂದಿದ್ದು, ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರೊಂದಿಗೆ ಮಾತನಾಡಿದ ಬಳಿಕ, ಕಾನೂನುಬದ್ಧ ಕ್ರಮದಂತೆ ವಿಸ್ತೃತ ತನಿಖೆ ನಡೆಸುವಂತೆ ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಈ ಪ್ರಕರಣವು ಕೇರಳ ರಾಜ್ಯ ಸಾರಿಗೆ ಯೋಜನೆ (KSTP) ಅಡಿಯಲ್ಲಿ ಎಂಸಿ ರಸ್ತೆಯ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ PATI-BEL ಒಕ್ಕೂಟದೊಂದಿಗೆ ಕೆಲಸ ಮಾಡುತ್ತಿದ್ದ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆಗೆ ಸಂಬಂಧಿಸಿದೆ.

2006ರಲ್ಲಿ ವಿಶ್ವಬ್ಯಾಂಕ್‌ನ ನೆರವಿನಿಂದ 215 ಕೋಟಿ ರೂ ವೆಚ್ಚದಲ್ಲಿ ಅಂಗಮಾಲಿ–ತಿರುವನಂತಪುರಂ ನಡುವಿನ ಎಂಸಿ ರಸ್ತೆಯ ಪುನರ್‌ನಿರ್ಮಾಣ ಯೋಜನೆಯನ್ನು ಕೆಎಸ್‌ಟಿಪಿ ಕೈಗೆತ್ತಿಕೊಂಡಿತ್ತು. ಮಲೇಷ್ಯಾದ ಕಂಪನಿ ಮತ್ತು ಭಾಗೀರಥ ಎಂಜಿನಿಯರಿಂಗ್‌ನ ಜಂಟಿ ಸಹಭಾಗಿತ್ವದ PATI-BEL ಸಂಸ್ಥೆ ಈ ಯೋಜನೆಯ ಕಾಮಗಾರಿಯನ್ನು ಕೈಗೊಂಡಿತ್ತು ಎಂದು ಚೆನ್ನಿತ್ತಲ ಹೇಳಿದರು.

ಕಾಮಗಾರಿ ನಡೆಯುತ್ತಿದ್ದ ವೇಳೆ ಲೀ ಅವರು ಹಲವು ದೂರುಗಳನ್ನು ನೀಡಿದ್ದರು. ಬಳಿಕ ಮಲೇಷ್ಯಾಕ್ಕೆ ಮರಳಿದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸಚಿವರು ತಿಳಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಈ ಹಿಂದೆ ವರದಿ ಮಾಡಿದಂತೆ, ಲೀ ಅವರ ಸಾವಿನ ಬಳಿಕ 2006ರಲ್ಲಿ ಭ್ರಷ್ಟಾಚಾರ ನಿಗ್ರಹ ತನಿಖೆ ಆರಂಭವಾಗಿತ್ತು. ಕೌಲಾಲಂಪುರದಿಂದ ಬರೆಯಲಾಗಿದ್ದ ಪತ್ರದ ವಿಷಯ ಸೇರಿದಂತೆ ಪ್ರಕರಣದ ವಿವಿಧ ಅಂಶಗಳನ್ನು ತನಿಖೆ ನಡೆಸಲಾಗಿತ್ತು.

No Comments

Leave A Comment