ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...

ಕಾಸರಗೋಡು: ಲಾರಿಗೆ ಎರಡು ಕಾರುಗಳು ಡಿಕ್ಕಿ; ಆರು ಮಂದಿಗೆ ಗಾಯ

ಕಾಸರಗೋಡು:ಸೆ.20 . ಎರಡು ಕಾರುಗಳು ನಿಯಂತ್ರಣ ತಪ್ಪಿ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಬದಿಯಡ್ಕ ಸಮೀಪದ ಕನ್ಯಪಾಡಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.

ಅಪಘಾತಕ್ಕೀಡಾದ ಎರಡು ಕಾರುಗಳಲ್ಲಿ ಉಪ್ಪಳದ ಮುಸೋಡಿ ನಿವಾಸಿಗಳಾದ ಒಟ್ಟು ಒಂಬತ್ತು ಯುವಕರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿವೇಗವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಲಾರಿಯ ಡೀಸೆಲ್ ಮತ್ತು ತೈಲ ಟ್ಯಾಂಕ್‌ಗಳು ಕೂಡ ಒಡೆದು, ರಸ್ತೆಯ ಮೇಲೆ ಇಂಧನ ಸೋರಿಕೆಯಾಗಿದೆ. ಇದರಿಂದ ಆ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಹಿರಿಯ ಅಧಿಕಾರಿ ಸುಕು ವರ್ಗೀಸ್ ನೇತೃತ್ವದ ಅಗ್ನಿಶಾಮಕ ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು. ಅಗ್ನಿಶಾಮಕ ಸಿಬ್ಬಂದಿಗಳಾದ ಕೆ. ವಿಜಯಿತಿನ್ ಕೃಷ್ಣನ್, ಅತುಲ್ ರವಿ, ಸಿ.ಕೆ. ಅಭಿನಂದ್, ಎನ್.ಪಿ. ರಾಕೇಶ್ ಹಾಗೂ ಒ.ಕೆ. ಪ್ರಜಿತ್ ಅವರು ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಂಡು, ಜಖಂಗೊಂಡ ವಾಹನಗಳಲ್ಲಿ ಸಿಲುಕಿದ್ದ ಯುವಕರನ್ನು ರಕ್ಷಿಸಿದ್ದಾರೆ.

ಬಳಿಕ ರಸ್ತೆಯ ಮೇಲೆ ಸೋರಿಕೆಯಾಗಿದ್ದ ತೈಲ ಮತ್ತು ಡೀಸೆಲ್ ಅನ್ನು ತೆರವುಗೊಳಿಸಿ, ವಾಹನ ಸಂಚಾರ ಸುಗಮವಾಗುವಂತೆ ಕ್ರಮ ಕೈಗೊಳ್ಳಲಾಯಿತು. ಅಪಘಾತಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment