.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಸುಡುಬಿಸಿಲಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ “ವಿಟ್ಲಪಿಂಡಿ” ವೈಭವಕ್ಕೆ ಸಾಕ್ಷಿಯಾದ ಶ್ರೀಕೃಷ್ಣನಗರಿ ಉಡುಪಿ…

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶನಿವಾರದ೦ದು “ವಿಟ್ಲಪಿಂಡಿ” ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಚಿನ್ನದ ರಥೋತ್ಸವ, ಗೊಲ್ಲವೇಷಧಾರಿಗಳ ಮೊಸರು ಕುಡಿಕೆ ಒಡೆಯುವ ಸಂಪ್ರದಾಯ, ವೈವಿಧ್ಯಮಯ ವೇಷಗಳ ಮೆರವಣಿಗೆ ಹಾಗೂ ಮಲ್ಲಯುದ್ಧ ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.

ಶುಕ್ರವಾರ ಅಷ್ಟಮಿ ಹಬ್ಬ ಆರಂಭಗೊಂಡಿದ್ದು, ಇಡೀ ದಿನ ರಾಜಾಂಗಣ ಹಾಗೂ ರಥಬೀದಿಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶನಿವಾರ ಬೆಳಗ್ಗಿನಿಂದಲೇ ವಿಟ್ಲಪಿಂಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಕೃಷ್ಣಮಠದತ್ತ ಆಗಮಿಸಿದ್ದರು.

ಉತ್ಸವದ ಅಂಗವಾಗಿ ರಾಜಾಂಗಣದಲ್ಲಿ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನ 3.30ರ ಬಳಿಕ ಕೃಷ್ಣಮಠದ ರಥಬೀದಿ ಸೇರಿದಂತೆ ಉಡುಪಿ ನಗರದ ಪ್ರಮುಖ ಬೀದಿಗಳು ವಿವಿಧ ವೇಷಧಾರಿಗಳಿಂದ ತುಂಬಿ ತುಳುಕುತ್ತಿದ್ದವು. ಹುಲಿವೇಷ ಸೇರಿದಂತೆ ಜನಪದ ಮತ್ತು ಪೌರಾಣಿಕ ಹಿನ್ನೆಲೆಯ ತರಹೇವಾರಿ ವೇಷಗಳು ಜನರ ಗಮನ ಸೆಳೆದವು.

ಪರ್ಯಾಯ  ಶ್ರೀಶಿರೂರು ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣನ ಮೃಣ್ಮಯ ಮೂರ್ತಿಗೆ ಷೋಡಷೋಪಚಾರ ಪೂಜೆ ಸಲ್ಲಿಸಿ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ಸುಮಾರು 3 ಗಂಟೆಗೆ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ರಥಬೀದಿಗೆ ತರಲಾಯಿತು.

ಬಳಿಕ ಪರ್ಯಾಯ ಶ್ರೀಪಾದರು ಆರತಿ ಬೆಳಗುವ ಮೂಲಕ ವಿಟ್ಲಪಿ೦ಡಿಯ ರಥೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ರಥಬೀದಿಯ ಗುರ್ಜಿಗಳಲ್ಲಿ ಕಟ್ಟಲಾಗಿದ್ದ ಮೊಸರು ಕುಡಿಕೆಗಳನ್ನು ಗೊಲ್ಲವೇಷಧಾರಿಗಳು ಒಡೆಯುವ ಮೂಲಕ ಸಂಪ್ರಾದಾಯವನ್ನು ನೆರವೇರಿಸಿದರು.

ಮೆರವಣಿಗೆಯಲ್ಲಿ ವಿವಿಧ ಜನಪದ ಹುಲಿವೇಷಗಳು ಹಾಗೂ ವೈವಿಧ್ಯಮಯ ವೇಷಧಾರಿಗಳು ಪಾಲ್ಗೊಂಡು ಉತ್ಸವದ ಮೆರುಗನ್ನು ಹೆಚ್ಚಿಸಿದರು. ರಥಬೀದಿಯುದ್ದಕ್ಕೂ ನೆರೆದಿದ್ದ ಭಕ್ತರು ಮತ್ತು ಸಾರ್ವಜನಿಕರು ವೇಷಧಾರಿಗಳ ಪ್ರದರ್ಶನವನ್ನು ಕಣ್ತುಂಬಿಕೊಂಡರು.

 

ಮೊದಲ ಬಾರಿಗೆ ಮಲ್ಲಯುದ್ಧ…

ವಿಟ್ಲಪಿಂಡಿ ಉತ್ಸವದ ಅಂಗವಾಗಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಥಬೀದಿಯಲ್ಲಿ ಮಲ್ಲಯುದ್ಧವನ್ನು ಆಯೋಜಿಸಲಾಗಿತ್ತು.ಶ್ರೀಕೃಷ್ಣಮಠದ ಪರ್ಯಾಯ ಶ್ರೀಶಿರೂರು ಮಠದ ಮು೦ಭಾಗದಲ್ಲಿ ಇದಕ್ಕಾಗಿ ವಿಶೇಷ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು.

ವಿವಿಧ ಮಲ್ಲರು ಅಖಾಡಕ್ಕಿಳಿದು ತಮ್ಮ ಕಸರತ್ತು ಮತ್ತು ಪೈಪೋಟಿಯನ್ನು ಪ್ರದರ್ಶಿಸಿದರು. ಸಾವಿರಾರು ಭಕ್ತರು ಮಲ್ಲಯುದ್ಧವನ್ನು ಕಣ್ತುಂಬಿಕೊಂಡು ರೋಮಾಂಚನಗೊಂಡರು. ಸಂಪ್ರದಾಯ ಮತ್ತು ಜನಪದ ಕಲೆಯೊಂದಿಗೆ ಕ್ರೀಡಾ ಪ್ರದರ್ಶನವೂ ಸೇರ್ಪಡೆಯಾದ ವಿಟ್ಲಪಿಂಡಿ ಮಹೋತ್ಸವವು ಈ ಬಾರಿ ವಿಶೇಷ ಆಕರ್ಷಣೆಯಾಗಿ ಮೂಡಿಬಂತು.

ವಿಟ್ಲಪಿಂಡಿಯಲ್ಲಿ ‘ಸೊಳ್ಳೆ’–‘ನರ್ಸ್’ ಜೋಡಿ ವಿಶೇಷ ಆಕರ್ಷಣೆ: ವೇಷದ ಮೂಲಕ ಆರೋಗ್ಯ ಜಾಗೃತಿ…

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ವಿವಿಧ ಆಕರ್ಷಕ ವೇಷಗಳ ನಡುವೆ ಮಲೇರಿಯಾ ಜಾಗೃತಿ ಮೂಡಿಸುವ ಸೊಳ್ಳೆ ಹಾಗೂ ನರ್ಸ್ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆದರು.

ರಥಬೀದಿಯಲ್ಲಿ ಸಂಚರಿಸಿದ ವೇಷಧಾರಿಗಳು ಸಾರ್ವಜನಿಕರಲ್ಲಿ ಮಲೇರಿಯಾ ರೋಗದ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಸೊಳ್ಳೆಯ ವೇಷದೊಂದಿಗೆ ನರ್ಸ್ ವೇಷಧಾರಿಯೊಬ್ಬರು ವಿಶಿಷ್ಟ ರೀತಿಯಲ್ಲಿ ಜಾಗೃತಿ ಸಂದೇಶ ಸಾರಿದರು.  

ನರ್ಸ್ ವೇಷಧಾರಿ ಒಂದು ಕೈಯಲ್ಲಿ ಇಂಜೆಕ್ಷನ್ ಹಿಡಿದುಕೊಂಡಿದ್ದರೆ, ಇನ್ನೊಂದು ಕೈಯಲ್ಲಿ ಮಲೇರಿಯಾ ರೋಗದ ಮುಂಜಾಗ್ರತಾ ಕ್ರಮಗಳು ಹಾಗೂ ನಿಯಂತ್ರಣದ ಕುರಿತು ಮಾಹಿತಿ ನೀಡುವ ಫಲಕವನ್ನು ಹಿಡಿದಿದ್ದರು.

ವಿಟ್ಲಪಿಂಡಿ ಸಂಭ್ರಮಕ್ಕೆ ಮನರಂಜನೆಯ ಜೊತೆಗೆ ಸಾಮಾಜಿಕ ಜಾಗೃತಿಯ ಸ್ಪರ್ಶ ನೀಡಿದ ಈ ವಿನೂತನ ವೇಷಗಳು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

No Comments

Leave A Comment