ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...

ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ: ‘Tehelka’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಮುಂಬೈ: 2013ರ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ‘ತೆಹೆಲ್ಕಾ’ ನಿಯತಕಾಲಿಕೆಯ ಮಾಜಿ ಮುಖ್ಯ ಸಂಪಾದಕ ತರುಣ್ ತೇಜಪಾಲ್ ಅವರಿಗೆ ಬಾಂಬೆ ಹೈಕೋರ್ಟ್‌ ಗುರುವಾರ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಬಾಂಬೆ ಹೈಕೋರ್ಟ್‌ನ ಗೋವಾ ಪೀಠ, 2021ರಲ್ಲಿ ಕೆಳ ಹಂತದ ಸೆಷನ್ಸ್ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ರದ್ದುಗೊಳಿಸಿದ್ದು, ತೇಜ್‌ಪಾಲ್ ತಪ್ಪಿತಸ್ಥರೆಂದು ಇಂದು ಬೆಳಗ್ಗೆ ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದರಿಸಿತ್ತು.

ಇಂದು ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮಸಂಡೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆಯ ಜೊತೆ 5 ಲಕ್ಷ ರೂ. ದಂಡವನ್ನು ವಿಧಿಸಿದೆ.

ನ್ಯಾಯಾಲಯವು ಅಪರಾಧಿ ತರುಣ್ ತೇಜ್‌ಪಾಲ್‌ಗೆ ಶರಣಾಗಲು ಎರಡು ವಾರಗಳ ಕಾಲಾವಕಾಶ ನೀಡಿದ್ದು, ತೀರ್ಪಿನ ನಂತರ ಮಾಜಿ ಸಂಪಾದಕ, ತಾನು “ರಾಜಕೀಯಕ್ಕೆ ಬಲಿಯಾಗಿದ್ದೇನೆ” ಮತ್ತು ತಮ್ಮ ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376(2)(f), 376(2)(k) (ಅತ್ಯಾಚಾರ) ಹಾಗೂ ಸೆಕ್ಷನ್ 354A, 354B (ಲೈಂಗಿಕ ಕಿರುಕುಳ) ಅಡಿಯಲ್ಲಿ 62 ವರ್ಷದ ತೇಜ್‌ಪಾಲ್ ದೋಷಿ ಎಂದು ನ್ಯಾಯಪೀಠ ತೀರ್ಮಾನಿಸಿದೆ.

2013ರ ನವೆಂಬರ್‌ನಲ್ಲಿ ಗೋವಾದ ರೆಸಾರ್ಟ್‌ನಲ್ಲಿ ನಡೆದ ತೆಹಲ್ಕಾ ಮ್ಯಾಗಜಿನ್‌ನ ವಾರ್ಷಿಕ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ಲಿಫ್ಟ್‌ನೊಳಗೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ಮಹಿಳಾ ಉದ್ಯೋಗಿಯೊಬ್ಬರು ತರುಣ್ ತೇಜ್‌ಪಾಲ್ ವಿರುದ್ಧ ಆರೋಪಿಸಿದ್ದರು.

2017 ರಲ್ಲಿ ಮಾಪುಸಾ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿ 2021 ರಲ್ಲಿ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು.

No Comments

Leave A Comment