ಬೆಳ್ತಂಗಡಿಯಲ್ಲಿ ಧಾರಾಕಾರ ಮಳೆ,ತುಂಬಿ ತುಳುಕಿದ ನದಿಗಳು, ಹಲವೆಡೆ ನೆರೆ ಭೀತಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ಶನಿವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧರ್ಮಸ್ಥಳದ ನೇತ್ರಾವತಿ ಸೇರಿದಂತೆ ತಾಲೂಕಿನ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿ ಆವರಿಸಿದೆ.
ಭಾರೀ ಗಾಳಿಯೂ ಬೀಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯದಂಚಿನ ಪ್ರದೇಶಗಳಲ್ಲಿ ಬೃಹತ್ ಮರಗಳು ಉರುಳುವ ಆತಂಕ ಎದುರಾಗಿದೆ. ಬೆಳ್ತಂಗಡಿ–ಕಿಲ್ಲೂರು ರಸ್ತೆಯ ಪುತ್ರಬೈಲು ಬಳಿ ಸ್ಥಳೀಯ ನದಿಯ ನೀರು ರಸ್ತೆಗೆ ಹರಿದು ಬಂದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ನೆರಿಯಾ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ಹಾನಿಯಾಗಿದ್ದು, ತಾಲೂಕಿನ ಬಹುತೇಕ ಕಿಂಡಿ ಅಣೆಕಟ್ಟುಗಳ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನಾವೂರು ಪೇಟೆಯಲ್ಲಿ ಹಳ್ಳ–ಕೊಳ್ಳ ಹಾಗೂ ಚರಂಡಿಗಳು ತುಂಬಿ ಹರಿದ ಪರಿಣಾಮ ಅಂಗಡಿಗಳಿಗೆ ನೀರು ನುಗ್ಗಿದೆ. ಮುಂಡಾಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯ ಪರಿಣಾಮ ನದಿ ಹಾಗೂ ತೋಡುಗಳು ಉಕ್ಕಿ ಹರಿದು ಗದ್ದೆ, ತೋಟಗಳು ಜಲಾವೃತವಾಗಿವೆ. ಕೆಲ ಮನೆಗಳಿಗೂ ನೀರು ನುಗ್ಗಿದ್ದು, ಕೃಷಿಕರು ಬೆಳೆ ಹಾನಿಯ ಆತಂಕ ಎದುರಿಸುತ್ತಿದ್ದಾರೆ.
ಇನ್ನೊಂದೆಡೆ, ಮುಂಡಾಜೆ–ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ ಸಂಭವಿಸಿರುವುದರಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಉಜಿರೆ–ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮೇಲೂ ನೀರು ಹರಿಯುತ್ತಿದ್ದು, ರಸ್ತೆ ನದಿಯಂತಾಗಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದ್ದು, ನಿರಂತರ ಮಳೆ ಮುಂದುವರಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆಡಳಿತವು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
Related