..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ವರ್ಷ125ನೇ ವರ್ಷದ ಸಂಭ್ರಮಾಚರಣೆಗೆ ಕರಸೇವೆಯ ಮೂಲಕ ಗಾಂಧಿ ಜಯಂತಿ ಆಚರಣೆಯೊಂದಿಗೆ ಶುಕ್ರವಾರ ಚಾಲನೆ ನೀಡಲಾಯಿತು....
ಉಡುಪಿಯಲ್ಲಿ ನೂತನ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅದ್ದೂರಿ ಉದ್ಘಾಟನೆ…
ಉಡುಪಿ: ಸಹಕಾರಿ ಸಂಸ್ಥೆಗಳು ಜನರ ವಿಶ್ವಾಸ ಗಳಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.ಕಿನ್ನಿಮೂಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಆರಂಭಗೊಂಡ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಬುಧವಾರ ಉದ್ಘಾಟಿಸಿ ಬಳಿಕ ಶ್ರೀ ವೀರಭದ್ರ ಕಲಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ಇದಕ್ಕೆ ಇಲ್ಲಿನ ಪರಸ್ಪರ ಸಹಕಾರದ ಸಂಸ್ಕೃತಿ ಹಾಗೂ ಸಮಾಜದೊಂದಿಗೆ ಬೆಸೆದುಕೊಂಡು ಕಾರ್ಯನಿರ್ವಹಿಸುವ ಸಂಸ್ಥೆಗಳ ಪರಂಪರೆಯೇ ಪ್ರಮುಖ ಕಾರಣವಾಗಿದೆ. ಹೊಸದಾಗಿ ಆರಂಭಗೊಂಡಿರುವ ಕಿದಿಯೂರು ಕ್ರೆಡಿಟ್ ಕೋ-ಆಪ್ ಸೊಸೈಟಿ ಜನರ ವಿಶ್ವಾಸ ಗಳಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ಯಾಮಿಲಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಜಿ. ಶಂಕರ್ ಹಾಗೂ ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ, ಸಣ್ಣ ಹಣಕಾಸು ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸಬೇಕೆಂದು ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕಿದಿಯೂರು ಕ್ರೆಡಿಟ್ ಕೋ-ಆಪ್ ಸೊಸೈಟಿ ಸಮಾಜಮುಖಿ ಸೇವೆಗಳ ಮೂಲಕ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಸೊಸೈಟಿ ಅಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಅಶಕ್ತರಿಗೆ ನೆರವಾಗುವುದು ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಸಹಕಾರಿ ಕ್ಷೇತ್ರಕ್ಕೆ ಹೊಸ ಹೆಜ್ಜೆ ಇಟ್ಟಿದ್ದೇವೆ. ಸಂಸ್ಥೆಯ ಲಾಭಾಂಶದ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಡುವ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎ. ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಡಾ. ಭರತ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇ೦ದ್ರಾಳಿ, ಕೆ.ಕೃಷ್ಣಮೂರ್ತಿ, ಜಯಪ್ರಕಾಶ್ ಕೆದ್ಲಾಯ ಸೇರಿದಂತೆ ಹಲವು ಗಣ್ಯರು ಹಾಗೂ ಸೊಸೈಟಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಯಕ್ಷ-ಗಾನ-ನಾದ ವೈಕುಂಠ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗುರುಪ್ರಸಾದ್ ಬೋಳಿ ಕಾರ್ಯಕ್ರಮ ನಿರೂಪಿಸಿದರು.