....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಮಂಗಳೂರು: ಮಾದಕ ವಸ್ತು ಸಾಗಾಟ- ಇಬ್ಬರ ಸೆರೆ- 5 ಕೋಟಿ 20 ಲಕ್ಷ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ವಶಕ್ಕೆ
ಮಂಗಳೂರು: ಜು.16: ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಾಜಧಾನಿ ದೆಹಲಿಯಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿಕೊಂಡು ಬೆಂಗಳೂರಿಗೆ ಸಾಗಾಟ ಮಾಡುತ್ತಿರುವಾಗ ಬೆಳ್ತಂಗಡಿ ಮೂಲದ ಇಬ್ಬರನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಬೃಹತ್ ಪ್ರಮಾಣದ 5 ಕೆಜಿ 196 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಬೆಳ್ತಂಗಡಿ ತಾಲ್ಲೂಕಿನ ಇಂಡಬೆಟ್ಟು ಗ್ರಾಮದ ಮೊಹಮ್ಮದ್ ಅಲ್ಫಾಜ್( 28), ಉಜಿರೆ ಲಾಯಿಲಾ ಗ್ರಾಮದ ಮೊಹಮ್ಮದ್ ಮುಸ್ತಾಫಾ (28) ಎಂದು ಗುರುತಿಸಲಾಗಿದೆ.
ಜೂನ್ 25, 2026 ರಂದು ಮಂಗಳೂರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಬಳಿಯ ಮನೆಯೊಂದರಲ್ಲಿ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಾದಕ ವಸ್ತುವನ್ನು ಹೊಂದಿದ್ದ ಅಣ್ಣಪ್ಪ ಸ್ವಾಮಿ @ ಮನು ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ 1,50,000 ರೂ. ಮೌಲ್ಯದ 15.17 ಗ್ರಾಂ ಮಾದಕ ವಸ್ತು ಎಂಡಿಎಂಎ ನ್ನು ಸ್ವಾಧೀನಪಡಿಸಿಕೊಂಡು ಆತನ ವಿರುದ್ಧ ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು.
ಈ ಪ್ರಕರಣದಲ್ಲಿ ಆರೋಪಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡಿರುವ ಡ್ರಗ್ಸ್ ಪೆಡ್ಲರ್ ಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಮುಂದುವರಿಸಿ, ಡ್ರಗ್ ಪೆಡ್ಲರ್ ಗಳ ಮಾಹಿತಿ ಸಂಗ್ರಹಿಸಿ ಮಾದಕ ವಸ್ತುವನ್ನು ಪೂರೈಕೆ ಮಾಡುವ ವ್ಯಕ್ತಿಯು ದೆಹಲಿಯಿಂದ ಮಾದಕವಸ್ತು ಖರೀದಿಸಿಕೊಂಡು ಬೆಂಗಳೂರಿಗೆ ಹೋಗುತ್ತಿರುವಾಗ ಕುರಿತು ಮಾಹಿತಿಯನ್ನು ಪಡೆದ ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಜುಲೈ 15, 2026 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಎಂಬಲ್ಲಿಗೆ ದಾಳಿ ನಡೆಸಿದರು. ಈ ವೇಳೆ ಆರೋಪಿಗಳನ್ನು ಪತ್ತೆ ಅವರುಗಳ ವಶದಿಂದ ಒಟ್ಟು 5 ಕೋಟಿ 20 ಲಕ್ಷ ರೂ. ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ, ಬ್ಯಾಗ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮೊಹಮ್ಮದ್ ಅಲ್ಫಾಜ್ ಎಂಬಾತನ ವಿರುದ್ದ ಈ ಹಿಂದೆ 2024 ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಾಗೂ 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಎಮ್.ಡಿ.ಎಮ್.ಎ ಮಾರಾಟ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿದೆ.
ಆರೋಪಿತರು ಕಾರಿನ ಮೂಲಕ ದೆಹಲಿಯಿಂದ ಮಾದಕವಸ್ತುವನ್ನು ಖರೀದಿಸಿಕೊಂಡು, ಬೆಂಗಳೂರು ನಗರವನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳ ರಾಜ್ಯದ ಇತರೆ ಕಡೆಗಳಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ಮುಂದುವರಿಯಲಿದೆ.
ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದಾರೆ.