ವಯನಾಡಿನಲ್ಲಿ ಮತ್ತೆ ಭಾರೀ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ...ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ: ವಾಹನಗಳ ಸಂಚಾರಕ್ಕಿಲ್ಲ ತೊಂದರೆ...

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

ದುಬೈ: ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಅಮೆರಿಕ ಭಾನುವಾರ ಮುಂಜಾನೆ ಇರಾನ್‌ನ ಸುಮಾರು 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಬಹ್ರೇನ್, ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಡೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ.

ಅಮೆರಿಕದ ಸೇನೆಯ ಸೆಂಟ್ರಲ್ ಕಮಾಂಡ್ (CENTCOM) ಮಾಹಿತಿ ಪ್ರಕಾರ, ಈ ವಾರದಲ್ಲಿ ನಡೆಸಲಾದ ಮೂರನೇ ಹಂತದ ದಾಳಿಯಲ್ಲಿ ಕ್ಷಿಪಣಿ ಉಡಾವಣಾ ತಾಣಗಳು, ಡ್ರೋನ್ ನೆಲೆಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರಗಳು, ಸಂವಹನ ಕೇಂದ್ರಗಳು ಸೇರಿದಂತೆ ಸುಮಾರು 140 ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.

“ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ” ಎಂದು ಸೆಂಟ್ಕಾಮ್ ತಿಳಿಸಿದೆ.

ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ಮಾತನಾಡಿ, “ಇರಾನ್ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಅದರ ಬೆಲೆ ಈಗ ತೆರಬೇಕಾಗಿದೆ” ಎಂದು ಹೇಳಿದ್ದಾರೆ.

ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್ ಕ್ಷಿಪಣಿ ದಾಳಿ

ಅಮೆರಿಕದ ದಾಳಿಯ ಬೆನ್ನಲ್ಲೇ ಇರಾನ್ ಬಹ್ರೇನ್, ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಕಡೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.

ಕತಾರ್‌ನಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಕ್ಷಿಪಣಿ ಎಚ್ಚರಿಕೆ ಸೈರನ್ ಮೊಳಗಿದೆ. ಕತಾರ್ ಸೇನೆ ಇರಾನ್ ಉಡಾಯಿಸಿದ್ದ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದಿರುವುದಾಗಿ ತಿಳಿಸಿದೆ.

ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಐದನೇ ನೌಕಾಪಡೆಯ ನೆಲೆ ಹೊಂದಿರುವ ಬಹ್ರೇನ್‌ನಲ್ಲೂ ಕ್ಷಿಪಣಿ ಎಚ್ಚರಿಕೆ ನೀಡಲಾಗಿದೆ.

ಯುಎಇ ಕೂಡ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಸಾಧ್ಯತೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕೆಲವು ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ವರದಿಯಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಮೇಲೆ ದಾಳಿ

ಹಾರ್ಮುಜ್ ಜಲಸಂಧಿಯಲ್ಲಿ ಸೈಪ್ರಸ್ ಧ್ವಜ ಹೊಂದಿದ್ದ ಕಂಟೇನರ್ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ.

ದಾಳಿಯಿಂದ ಹಡಗಿನ ಎಂಜಿನ್ ಕೊಠಡಿಗೆ ಭಾರೀ ಹಾನಿಯಾಗಿದ್ದು, ಒಬ್ಬ ಸಿಬ್ಬಂದಿ ನಾಪತ್ತೆಯಾಗಿದ್ದಾನೆ ಎಂದು ಸೆಂಟ್ಕಾಮ್ ತಿಳಿಸಿದೆ.

ಬ್ರಿಟನ್‌ನ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಪ್ರಕಾರ, ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಹಡಗನ್ನು ತೊರೆದು ಜೀವ ರಕ್ಷಕ ದೋಣಿಗಳಲ್ಲಿ ತೆರಳಿದ್ದಾರೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮಾತ್ರ, ಹಲವು ಹಡಗುಗಳು ನಿಗದಿತ ಮಾರ್ಗವನ್ನು ಅನುಸರಿಸದೇ ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದವು. ಅವುಗಳಲ್ಲಿ ಒಂದನ್ನು ಎಚ್ಚರಿಕೆ ಗುಂಡು ಹಾರಿಸಿ ನಿಲ್ಲಿಸಲಾಗಿದೆ ಎಂದು ಹೇಳಿದೆ.

ಅನಿರ್ದಿಷ್ಟಾವಧಿಗೆ ಹಾರ್ಮುಜ್ ಜಲಸಂಧಿ ಬಂದ್

ಹಾರ್ಮುಜ್ ಜಲಸಂಧಿಯನ್ನು “ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ” ಎಂದು ಇರಾನ್ ಘೋಷಿಸಿದ್ದು, ಅಮೆರಿಕ ಮತ್ತಷ್ಟು ದಾಳಿ ನಡೆಸಿದರೆ ಪ್ರದೇಶದಲ್ಲಿರುವ ಶತ್ರು ರಾಷ್ಟ್ರಗಳ ಹೆಚ್ಚುವರಿ ಸೇನಾ ನೆಲೆಗಳನ್ನು ಗುರಿಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ವ್ಯಾಪಾರದ ಸುಮಾರು 20 ಪ್ರತಿಶತ ಈ ಜಲಸಂಧಿಯ ಮೂಲಕವೇ ಸಾಗುವುದರಿಂದ, ಈ ಬೆಳವಣಿಗೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ರಾಜತಾಂತ್ರಿಕ ಮಾತುಕತೆಗೂ ಹಿನ್ನಡೆ

ಶನಿವಾರ ಇರಾನ್ ಹಾಗೂ ಒಮಾನ್ ವಿದೇಶಾಂಗ ಸಚಿವರು ಹಾರ್ಮುಜ್ ಜಲಸಂಧಿ ವಿಚಾರವಾಗಿ ಮಾತುಕತೆ ನಡೆಸಿದ್ದರು. ತಾಂತ್ರಿಕ ಹಾಗೂ ರಾಜಕೀಯ ಮಟ್ಟದಲ್ಲಿ ಚರ್ಚೆ ಮುಂದುವರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದರೂ, ಜಲಸಂಧಿಯನ್ನು ಎಲ್ಲ ರಾಷ್ಟ್ರಗಳಿಗೂ ಮುಕ್ತಗೊಳಿಸುವ ಬಗ್ಗೆ ಇರಾನ್ ಯಾವುದೇ ಭರವಸೆ ನೀಡಿಲ್ಲ.

ಪ್ರತೀಕಾರದ ಪ್ರತಿಜ್ಞೆ ಮಾಡಿದ ಖಮೇನಿ

ಈ ನಡುವೆ ಇರಾನ್‌ನ ನೂತನ ಸರ್ವೋಚ್ಚ ನಾಯಕ ಆಯತುಲ್ಲಾ ಮೊಜ್ತಬಾ ಖಮೇನಿ ಅವರು, ತಮ್ಮ ತಂದೆ ಹಾಗೂ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಘೋಷಿಸಿದ್ದಾರೆ.

ಪ್ರತೀಕಾರ ನಮ್ಮ ರಾಷ್ಟ್ರದ ಸಂಕಲ್ಪ. ಅದು ಖಂಡಿತವಾಗಿಯೂ ನೆರವೇರುತ್ತದೆ,” ಎಂದು ಅವರು ರಾಷ್ಟ್ರವನ್ನುದ್ದೇಶಿಸಿ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, ಕದನ ವಿರಾಮವನ್ನು ಹಾಳುಮಾಡಲು ಇರಾನ್‌ನ ಕೆಲವು ಕಠಿಣ ನಿಲುವಿನ ಗುಂಪುಗಳು ಸ್ವತಂತ್ರವಾಗಿ ದಾಳಿಗಳನ್ನು ನಡೆಸುತ್ತಿವೆ ಎಂಬ ಅನುಮಾನವಿದೆ. ಆದರೆ, ಇರಾನ್ ಸರ್ಕಾರ ದೇಶದ ಆಡಳಿತ ಮತ್ತು ಸೇನೆ ಹೊಸ ಸರ್ವೋಚ್ಚ ನಾಯಕರ ನೇತೃತ್ವದಲ್ಲಿ ಸಂಪೂರ್ಣ ಏಕೀಕೃತವಾಗಿದೆ ಎಂದು ಹೇಳಿದೆ.

ಕಳೆದ ವಾರ ನಡೆದ ಅಮೆರಿಕದ ಎರಡು ಹಂತದ ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 115ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಈ ಸಂಘರ್ಷ ಜಾಗತಿಕ ಭದ್ರತೆ ಹಾಗೂ ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

No Comments

Leave A Comment