.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಬೆಂಗಳೂರಲ್ಲಿ ಅತಿದೊಡ್ಡ ಹಗಲು ದರೋಡೆ: ಹೋಲ್‌ಸೇಲ್ ಖರೀದಿ ನೆಪದಲ್ಲಿ 3 ಕೋಟಿ ರೂ ಚಿನ್ನಾಭರಣ ಕದ್ದು ಪರಾರಿ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಅತಿದೊಡ್ಡ ಲೂಟಿ ನಡೆದಿದ್ದು, ಹೋಲ್‌ಸೇಲ್ ಚಿನ್ನ ಖರೀದಿಸುವುದಾಗಿ ನಂಬಿಸಿ 3 ಕೋಟಿ ರೂ. ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾದ ಘಟನೆ ಮಲ್ಲೇಶ್ವರದಲ್ಲಿ ನಡೆದಿದೆ.
ಚಿನ್ನಾಭರಣ ಕಂಪನಿಗೆ ವಂಚಿಸಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಆಭರಣಗಳೊಂದಿಗೆ ಪರಾರಿಯಾದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೇ 16 ರಂದು ಮಲ್ಲೇಶ್ವರಂನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಮತ್ತು ಆರೋಪಿಗಳನ್ನು ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್ ರಾವ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೆಹ್ತಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರೇಶ್ ಸೋನಿ ಎಂಬಾತ ತಾನು ಹೋಲ್‌ಸೇಲ್ ಚಿನ್ನದ ವ್ಯಾಪಾರಿ ಎಂದು ಪರಿಚಯಿಸಿಕೊಂಡು, 3 ಕೆಜಿ ಚಿನ್ನದ ಆಭರಣಗಳು ಬೇಕೆಂದು ಅಂಗಡಿಗೆ ಕರೆ ಮಾಡಿದ್ದ. ಬಳಿಕ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ತನ್ನ ಕಚೇರಿಗೆ ಆಭರಣಗಳ ಸ್ಯಾಂಪಲ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದ. ಅದರಂತೆ ಮಹೇಂದ್ರ ಕುಮಾರ್ ಜೈನ್ ಹಾಗೂ ಮತ್ತೊಬ್ಬ ಸಿಬ್ಬಂದಿ 3 ಕೆಜಿ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ತೆಗೆದುಕೊಂಡು ಆರೋಪಿಯ ಕಚೇರಿಗೆ ತೆರಳಿದ್ದರು.
ಸೋನಿ ತಾನು ಇಷ್ಟಪಟ್ಟ ಆಭರಣಗಳನ್ನು ಆಯ್ಕೆ ಮಾಡಿ, ಅವುಗಳನ್ನು ಯಂತ್ರವನ್ನು ಬಳಸಿ ಪರಿಶೀಲಿಸುವುದಕ್ಕೆ ಪಕ್ಕದ ಕ್ಯಾಬಿನ್‌ನಲ್ಲಿದ್ದ ರಾವ್ ಗೆ ನೀಡಿದ್ದಾರೆ. ರಾವ್, ಸುಮಾರು 1 ಕೆಜಿ, 850 ಗ್ರಾಂ ಆಭರಣಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ನಂತರ ರಾವ್ ನನ್ನು ಹುಡುಕೋದಾಗಿ ಹೇಳಿ ಜೊತೆಗಿದ್ದ ಇನ್ನಿಬ್ಬರು ಆರೋಪಿಗಳು ಕೂಡ ಎಸ್ಕೇಪ್ ಆಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಕಳವಾಗಿರುವ ಚಿನ್ನಾಭರಣಗಳ ಮೌಲ್ಯ ಅಂದಾಜು 3 ಕೋಟಿ ರೂ. ಎಂದು ಹೇಳಲಾಗಿದೆ. ಆರೋಪಿಗಳು ಪೂರ್ವಯೋಜಿತವಾಗಿ ಮೋಸ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.