ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.
ಶೀರೂರು ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯ: ಜ.9ರಂದು ಪುರಪ್ರವೇಶ, ಪೌರಸಮ್ಮಾನ
ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳ ಪರ್ಯಟನೆ ನಡೆಸಿ ಜನವರಿ 9 ರಂದು ಶ್ರೀ ಶೀರೂರು ಮೂಲಮಠದಿಂದ ಶ್ರೀರಾಮಚಂದ್ರ ದೇವರ ಮತ್ತು ಶ್ರೀಮುಖ್ಯಪ್ರಾಣರ ದರ್ಶನ ಮಾಡಿಕೊಂಡು ಹೊರಟು, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವರ ದರ್ಶನ ಮಾಡಿ ಅಲ್ಲಿಂದ ಮಧ್ಯಾಹ್ನ 3ಗಂಟೆಗೆ ಮೆರವಣಿಗೆಯೊಂದಿಗೆ ಪುರಪದೇಶ ಮಾಡಲಿದ್ದಾರೆ ಎಂದು ಪರ್ಯಾಯ ಸಮಿತಿಯ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿ ಶೀರೂರು ಮಠದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಶ್ರೀ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರ ವತಿಯಿಂದ ಶ್ರೀಪಾದರನ್ನು ಪಟ್ಟದ ದೇವರೊಂದಿಗೆ ಕಡಿಯಾಳಿ ರಾಷ್ಟ್ರೀಯ ಹೆದ್ದಾರಿಯಿಂದ ಬರಮಾಡಿಕೊಳ್ಳಲಾಗುವುದು ಎಂದರು.
ಭಾವೀ ಪರ್ಯಾಯ ಶ್ರೀಪಾದರು ಪುರ ಪ್ರವೇಶ ಮಾಡುವ ಸಂದರ್ಭದಲ್ಲಿ ಸುಮಾರು ಐದು ಸಾವಿರ ಜನ ಸೇರುವ ನಿರೀಕ್ಷೆಯಿದೆ. ಇದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕರುಗಳು, ಭಜನಾ ತಂಡಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಯ ಸದಸ್ಯರು, ಯುವಕ ಯುವತಿ ಮಂಡಲದ ಸದಸ್ಯರು ವಿವಿಧ ಕಲಾತಂಡಗಳ ಪ್ರದರ್ಶನಗಳು, ಸಾಂಸ್ಕೃತಿಕ ತಂಡದವರು, ವಿಶೇಷ ಟ್ಯಾಬ್ಲೊಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಲಿವೆ.
ಕಡಿಯಾಳಿಯಿಂದ ಹೊರಟ ಪುರಪ್ರವೇಶ ಮೆರವಣಿಗೆ ಕಲ್ಸಂಕ ಮಾರ್ಗವಾಗಿ ಸಿಟಿ ಬಸ್ ನಿಲ್ದಾಣ, ಕಿದಿಯೂರು ಹೋಟೆಲ್ ಮಾರ್ಗವಾಗಿ ಬಸ್ ನಿಲ್ದಾಣದ ಮುಖಾಂತರ ಹನುಮಾನ್ (ತ್ರಿವೇಣಿ) ವೃತ್ತದಿಂದ ಕನಕದಾಸ ರಸ್ತೆ ಮಾರ್ಗವಾಗಿ ರಥ ಬೀದಿಗೆ ಪ್ರವೇಶಿಸಲಿದೆ ಎಂದು ತಿಳಿಸಿದರು.
ಸ್ವಾಮೀಜಿಯವರು ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದು ಆ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ಹಾಗೂ ಶ್ರೀ ಕೃಷ್ಣ ಮುಖ್ಯ ಪ್ರಾಣದೇವರ ದರ್ಶನ ಮಾಡಿಕೊಂಡು ಉಡುಪಿ ನಗರಸಭೆ ವತಿಯಿಂದ ನಡೆಯಲಿರುವ ಪೌರ ಸಮ್ಮಾನ ವೇದಿಕೆಗೆ ಬಂದು ನಗರಸಭೆ ವಿವಿಧ ಸಂಘ ಸಂಸ್ಥೆ ಮತ್ತು ಸಾರ್ವಜನಿಕರಿಂದ ಸಮ್ಮಾನವನ್ನು ಸ್ವೀಕರಿಸಲಿರುವರು. ಈ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕರಾದ ಯಶಪಾಲ್ ಸುವರ್ಣರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಸ್ಮರೂಪಾ ಟಿ ಕೆ, ನಗರಸಭಾ ಆಯುಕ್ತರಾದ ಮಹಾಂತೇಶ ಹಂಗರಗಿ, ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗಡ ಮುಂತಾದವರು ಭಾಗವಹಿಸಲಿದ್ದಾರೆ.
ಪೌರ ಸಮ್ಮಾನದ ನಂತರ ಅದೇ ವೇದಿಕೆಯಲ್ಲಿ ಜನವರಿ 9 ಶುಕ್ರವಾರದಿಂದ 17 ಜನವರಿ ಶನಿವಾರದ ವರೆಗೆ ಪ್ರತಿದಿನ ಹೆಸರಾಂತ ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹೊರ ಕಾಣಿಕೆ ಮೆರವಣಿಗೆ :ಪರ್ಯಾಯ ಮಹೋತ್ಸವದಲ್ಲಿ ಹೊರೆ ಕಾಣಿಕೆ ಅತ್ಯಂತ ಪ್ರಮುಖ ಅಂಗವಾಗಿದ್ದು ಇದರ ಸಂಚಾಲಕ ಸುಪ್ರಸಾದ ಶೆಟ್ಟಿ ಅವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರಿಂದ, ಧಾರ್ಮಿಕ ಕ್ಷೇತ್ರಗಳಿಂದ ವಿವಿಧ ಸಂಘಟನೆಗಳಿಂದ ಸಮರೋಪಾದಿಯಲ್ಲಿ ಹೊರೆ ಕಾಣಿಕೆ ಸಾಗಿ ಬರಲಿದೆ.
ಜ. 10ರಿಂದ 17ರವರೆಗೆ ನಿರಂತರ ಹೊರೆ ಕಾಣಿಕೆ ಸಾಗಿ ಬರಲಿದೆ. ಹೊರೆ ಕಾಣಿಕೆ ಮೆರವಣಿಗೆಯು ಜೋಡುಕಟ್ಟೆಯಿಂದ ಹೊರಟು ಶ್ರೀ ಕೃಷ್ಣಮಠದ ಪಾರ್ಕಿಂಗ್ ಜಾಗದಲ್ಲಿರುವ ಉಗ್ರಾಣವನ್ನು ತಲುಪಲಿದೆ. ಇಲ್ಲಿ ಹೊರೆ ಕಾಣಿಕೆಯಿಂದ ಬಂದ ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು ಇದರೊಂದಿಗೆ ಬೇರೆಬೇರೆ ಮಳಿಗೆಗಳು ಬರಲಿದ್ದು, ಇದನ್ನು ಬೃಹತ್ ವಸ್ತು ಪ್ರದರ್ಶನವಾಗಿ ಮಾರ್ಪಾಡು ಮಾಡಲಾಗುವುದು.
ಇದೇ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು ಜ. 10ರಿಂದ 27ರವರೆಗೆ ರಾಷ್ಟ್ರ ರಾಜ್ಯದ ಹೆಸರಾಂತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಸಂಚಾಲಕರಾದ ಜಯಕರ ಶೆಟ್ಟಿ ಇಂದ್ರಾಳಿ, ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್, ಸುಪ್ರಸಾದ್ ಶೆಟ್ಟಿ ಬೈಕಾಡಿ, ರಮೇಶ್ ಕಾಂಚನ್, ದಿನಕರ ಹೇರೂರು ಹಾಗೂ ಇತರರು ಉಪಸ್ಥಿತರಿದ್ದರು.