ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಸಿಡಿದೆದ್ದ ರೈತರು; ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ!
ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಇಂದು ಮಧ್ಯಾಹ್ನದ ನಂತರ ಅವಳಿ ಜಿಲ್ಲೆಯಲ್ಲಿ ಬಂದ್ ಅಥವಾ ಹೆದ್ದಾರಿ ತಡೆ ನಡೆಸುವುದಾಗಿ ರೈತರು ಷರತ್ತು ವಿಧಿಸಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಬಂದ್ ನಡೆಸಿದ್ದರೆ ಬಾಗಲಕೋಟೆ ಜಿಲ್ಲೆಯ ರೈತರು ಜಿಲ್ಲೆಯ ಮೂರು ಸ್ಥಳಗಳಲ್ಲಿ ಹೆದ್ದಾರಿ ತಡೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹೆದ್ದಾರಿ ಬಂದ್‌ಗೆ ಮುಂದಾಗಿರುವ ರೈತರ ಮೇಲೆ ಪೊಲಿಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಲಾಠಿ ಚಾರ್ಜ್ಗೆ ಪ್ರತಿಯಾಗಿ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಹತ್ತರಗಿ ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಶುಕ್ರವಾರ ಕಬ್ಬು ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.