ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಿ೦ದ ಉಡುಪಿ ಶ್ರೀ ಕೃಷ್ಣಮಠದ ನೂತನ ‘ಯಾಳಿ’ ಲೋಕಾರ್ಪಣೆ
ಉಡುಪಿ: ಸುಮಾರು ಎಂಟು ಶತಮಾನಗಳಿಂದ ದ್ವೈತ ತತ್ವದ ಬೆಳಕನ್ನು ವಿಶ್ವಕ್ಕೆ ನೀಡಿದ ಆಚಾರ್ಯ ಮಧ್ವಕರಾರ್ಚಿತ ಉಡುಪಿ ಶ್ರೀಕೃಷ್ಣನ ಉಡುಪಿಯ ಕೃಷ್ಣಮಠದ ಪ್ರಾಚೀನ ಸೌಂದರ್ಯವನ್ನು ಆಧುನಿಕ ಬೆಳಕಿಂಡಿಯಲ್ಲಿ ದರ್ಶಿಸುವ ಅವಕಾಶವನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಲ್ಪಿಸಿದ್ದು, ಕರಾವಳಿಯ ಮೂಲ ವಾಸ್ತುಶೈಲಿ ಮಾದರಿಯ ಕಾಷ್ಠ ಯಾಳಿ (ಸುತ್ತುಪೌಳಿ)ಯನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಕನಕ ಗೋಪುರಕ್ಕೆ ಹೊಂದಿಕೊಂಡಿರುವ ಚಂದ್ರಶಾಲೆ ಸಹಿತ ಮಧ್ವ ಸರೋವರದ ವರೆಗೆ ಶ್ರೀಕೃಷ್ಣ ಆಲಯದ ಮೇಲ್ಛಾವಣಿಗೆ ಪ್ರಾಚೀನ ವಾಸ್ತುಶೈಲಿಯ ರೂಪ ನೀಡಲಾಗಿದೆ. ಆ ಮೂಲಕ ಕೃಷ್ಣಮಠದ ದಿವ್ಯ ಸೌಂದರ್ಯವನ್ನು ಭವ್ಯಗೊಳಿಸಲಾಗಿದೆ.
ನೂತನ ಯಾಳಿಯನ್ನು ಹೊಸ್ತಿಲ ಹುಣ್ಣಿಮೆಯ ಪರ್ವದಿನದಂದು ಆ.9ರ ಶನಿವಾರದ೦ದು ಬೆಳಿಗ್ಗೆ ಮಹಾಪೂಜೆಯ ಬಳಿಕ 10 ಗಂಟೆಗೆ ರಾಜ್ಯಸಭಾ ಸದಸ್ಯೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು, ಬಳಿಕ ರಾಜಾಂಗಣದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿದರು.
ಇನ್ಫೋಸಿಸ್ ಫೌಂಡೇಶನ್ ಪ್ರವರ್ತಕರಾದ ಶ್ರೀಮತಿ ಸುಧಾ ಮೂರ್ತಿ ಮತ್ತು ನಿವೃತ್ತ ಮುಖ್ಯ ನ್ಯಾಯಾಧೀಶ ಶ್ರೀ ದಿನೇಶ್ ಕುಮಾರ್ ರವರು ಅಭ್ಯಾಗತರಾಗಿ ಆಗಮಿಸಿದ್ದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.




















