ಕ್ವಿಂಗ್ಡಾವೊದಲ್ಲಿ ಚೀನಾ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್: ದ್ವಿಪಕ್ಷೀಯ ಸಂಬಂಧ ಸಂಕೀರ್ಣತೆ ತಪ್ಪಿಸಿ ಬಲವರ್ಧನೆಗೆ ಒತ್ತು
ಕ್ವಿಂಗ್ಡಾವೊ: ಭಾರತ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧಗಳಲ್ಲಿ ಸಕಾರಾತ್ಮಕ ಆವೇಗವನ್ನು ಕಾಯ್ದುಕೊಳ್ಳಬೇಕು ಮತ್ತು ಹೊಸ ಸಮಸ್ಯೆಯನ್ನು ತಪ್ಪಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ರಕ್ಷಣಾ ಮಂತ್ರಿ ಅಡ್ಮಿರಲ್ ಡಾನ್ ಜುನ್ ಅವರಿಗೆ ತಿಳಿಸಿದ್ದಾರೆ.
ನಿನ್ನೆ ಗುರುವಾರ ಸಂಜೆ ಚೀನಾದ ಬಂದರು ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ರಕ್ಷಣಾ ಸಚಿವರ ಸಮಾವೇಶದ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಡಾನ್ ಜುನ್ ಅವರೊಂದಿಗೆ ರಚನಾತ್ಮಕ ಮಾತುಕತೆ ನಡೆಸಿದರು.
ಪೂರ್ವ ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (LAC) ಉದ್ದಕ್ಕೂ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸಲು ಕಳೆದ ಅಕ್ಟೋಬರ್‌ನಲ್ಲಿ ಮಾಡಿಕೊಂಡ ಒಪ್ಪಂದ ನಂತರ ಭಾರತ ಮತ್ತು ಚೀನಾ ಎರಡೂ ತಮ್ಮ ಸಂಬಂಧಗಳನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿರುವ ಮಧ್ಯೆ ಭಾರತೀಯ ರಕ್ಷಣಾ ಸಚಿವರ ಚೀನಾ ಭೇಟಿ ನಡೆಯಿತು.
ಕ್ವಿಂಗ್ಡಾವೊದಲ್ಲಿ ನಡೆದ ಎಸ್ ಸಿಒ ರಕ್ಷಣಾ ಸಚಿವರ ಸಭೆಯ ಸಂದರ್ಭದಲ್ಲಿ ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾನ್ ಜುನ್ ಅವರೊಂದಿಗೆ ಮಾತುಕತೆ ನಡೆಸಲಾಯಿತು. ದ್ವಿಪಕ್ಷೀಯ ಸಂಬಂಧಗಳ ಕುರಿತಾದ ವಿಷಯಗಳ ಕುರಿತು ನಾವು ರಚನಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ರಾಜನಾಥ್ ಸಿಂಗ್ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಸುಮಾರು ಆರು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭಗೊಂಡಿರುವುದಕ್ಕೆ ಸಂತಸವಿದೆ. ಈ ಸಕಾರಾತ್ಮಕ ಆವೇಗವನ್ನು ಕಾಪಾಡಿಕೊಳ್ಳುವುದು ಮತ್ತು ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಸಂಕೀರ್ಣತೆಗಳನ್ನು ಸೇರಿಸುವುದನ್ನು ತಪ್ಪಿಸುವುದು ಎರಡೂ ಕಡೆಯವರ ಕರ್ತವ್ಯವಾಗಿದೆ ಎಂದು ರಾಜನಾಥ್ ಸಿಂಗ್ ಬರೆದುಕೊಂಡಿದ್ದಾರೆ.
ಬುದ್ಧಿವಂತಿಕೆ ಮತ್ತು ಚೈತನ್ಯವನ್ನು ಸಂಕೇತಿಸುವ ‘ಜೀವನ ವೃಕ್ಷ’ ಎಂಬ ಮಧುಬನಿ ವರ್ಣಚಿತ್ರವನ್ನು ರಾಜನಾಥ್ ಸಿಂಗ್ ಡಾನ್ ಅವರಿಗೆ ಪ್ರಸ್ತುತಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧುಬನಿ ಕಲಾ ಚಿತ್ರಕಲೆ ಬಿಹಾರದ ಮಿಥಿಲಾ ಪ್ರದೇಶದಲ್ಲಿ ಹುಟ್ಟಿಕೊಂಡಿದೆ. ಈ ಚಿತ್ರಕಲೆ ಬುದ್ಧಿವಂತಿಕೆ ಮತ್ತು ಚೈತನ್ಯದ ಸಂಕೇತವಾಗಿದೆ.
ಭಾರತವು ಚೀನಾದೊಂದಿಗೆ ಸಂಘರ್ಷ ಅಥವಾ ಮುಖಾಮುಖಿಯನ್ನು ಬಯಸುವುದಿಲ್ಲ ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿಭಾಯಿಸಲು, ಸಂವಹನವನ್ನು ಹೆಚ್ಚಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳ ಸ್ಥಿರ ಅಭಿವೃದ್ಧಿಗಾಗಿ ಪರಸ್ಪರ ನಂಬಿಕೆಯನ್ನು ಉತ್ತೇಜಿಸಲು ಸಿದ್ಧವಾಗಿದೆ ಎಂದು ರಾಜನಾಥ್ ಸಿಂಗ್ ಡಾನ್ ಅವರೊಂದಿಗಿನ ಸಭೆಯಲ್ಲಿ ಹೇಳಿದರು.
ಸಿಂಗ್ ಅವರ ಕ್ವಿಂಗ್ಡಾವೊ ಭೇಟಿಯು ಟಿಬೆಟ್‌ನಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯ ಪುನರಾರಂಭ ಸಮಯದಲ್ಲಿಯೇ ಆಗಿದೆ. ಇದು ಸುಮಾರು ಐದು ವರ್ಷಗಳ ಅಂತರದ ನಂತರ ನಡೆಯುತ್ತಿದೆ.
2020 ರ ಆರಂಭದಲ್ಲಿ COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಪೂರ್ವ ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಎರಡೂ ಕಡೆಯ ನಡುವಿನ ಮಿಲಿಟರಿ ಬಿಕ್ಕಟ್ಟಿನ ಕಾರಣದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ತೀರ್ಥಯಾತ್ರೆ ಮಾಡುವುದು ಹಿಂದೂಗಳು ಹಾಗೂ ಜೈನರು ಮತ್ತು ಬೌದ್ಧರಿಗೆ ಧಾರ್ಮಿಕ ಮಹತ್ವದ್ದಾಗಿದೆ.
ಪೂರ್ವ ಲಡಾಖ್‌ನಲ್ಲಿನ ಮಿಲಿಟರಿ ಬಿಕ್ಕಟ್ಟು ಮೇ 2020 ರಲ್ಲಿ ಪ್ರಾರಂಭವಾಯಿತು. ಆ ವರ್ಷದ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾರಕ ಘರ್ಷಣೆಯು ಎರಡು ನೆರೆಹೊರೆಯವರ ನಡುವಿನ ಸಂಬಂಧದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಯಿತು.
ಕಳೆದ ವರ್ಷ ಅಕ್ಟೋಬರ್ 21 ರಂದು ಅಂತಿಮಗೊಳಿಸಿದ ಒಪ್ಪಂದದ ಅಡಿಯಲ್ಲಿ ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನ ಕೊನೆಯ ಎರಡು ಘರ್ಷಣೆ ಬಿಂದುಗಳಿಂದ ಬೇರ್ಪಡುವಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಖಾಮುಖಿ ಪರಿಣಾಮಕಾರಿಯಾಗಿ ಕೊನೆಗೊಂಡಿತು.