
ನಾಗರಹೊಳೆ ಅತಿಕ್ರಮಣದಾರರಿಂದ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ: ಸಮಿತಿಯಿಂದ ತಿರಸ್ಕಾರ
ಬೆಂಗಳೂರು: ನಾಗರಹೊಳೆ ಹುಲಿ ಮೀಸಲು ಪ್ರದೇಶವನ್ನು (NTR) ಅತಿಕ್ರಮಣ ಮಾಡಿದ್ದಾರೆಂದು ಆರೋಪಿಸಲಾದ ವ್ಯಕ್ತಿಗಳು ಅರಣ್ಯ ಹಕ್ಕು ಕಾಯ್ದೆ (ಎಫ್‌ಆರ್‌ಎ) ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಉಪವಿಭಾಗ ಸಮಿತಿ ಇತ್ತೀಚೆಗೆ ತಿರಸ್ಕರಿಸಿದೆ. ಅರ್ಜಿದಾರರು ಸಂರಕ್ಷಿತ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಸಮಿತಿ ತೀರ್ಪು ನೀಡಿ ಕಾನೂನು ಕಾರ್ಯವಿಧಾನಗಳ ಪ್ರಕಾರ ಜಿಲ್ಲಾ ಮಟ್ಟದ ಸಮಿತಿಗಳ ಮುಂದೆ ಮೇಲ್ಮನವಿ ಸಲ್ಲಿಸಲು ಅವರಿಗೆ 60 ದಿನಗಳ ಕಾಲಾವಕಾಶ ನೀಡಿತು.
ಅರ್ಜಿದಾರರು, ತಾವು ಮೂಲ ಅರಣ್ಯ ನಿವಾಸಿಗಳು ಎಂದು ಸಾಬೀತುಪಡಿಸುವ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಲು ವಿಫಲರಾಗಿರುವುದರಿಂದ, ಹಕ್ಕುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಪಾದಿಸಿದರು.
ಅರ್ಜಿದಾರರಿಗೆ ಕಾಡಿನೊಳಗೆ ವಾಸಸ್ಥಳವನ್ನು ತೋರಿಸುವ ಐತಿಹಾಸಿಕ ಮತ್ತು ಕಾನೂನು ದಾಖಲೆಗಳಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು, ಸ್ಯಾಟಲೈಟ್ ಇಮೇಜ್ ಮತ್ತು ಜೈವಿಕ ಮೌಲ್ಯಮಾಪನಗಳು ಹಿಂದೆ ಇಲ್ಲಿ ಮಾನವನ ವಾಸಸ್ಥಳವಿತ್ತು ಎಂದು ಹೇಳುತ್ತಿಲ್ಲ.
ಈ ಮಧ್ಯೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (KSHRC) ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ನೀಡಿದೆ. ಕೊಡಗು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ, ಆಯೋಗವು 1993ರ ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ದೂರು ದಾಖಲಿಸಿದೆ ಎಂದು ತಿಳಿಸಿದೆ. ಜೂನ್ 19ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.
ಪೊನ್ನಂಪೇಟೆ ತಾಲ್ಲೂಕಿನ ಜೇನು ಕುರುಬ ಸಮುದಾಯದ 52 ಕುಟುಂಬಗಳನ್ನು ಈ ಹಿಂದೆ ಎನ್ ಟಿಆರ್ ನಿಂದ ಹೊರಹಾಕಲಾಗಿತ್ತು. ಈ ಕುಟುಂಬಗಳು ಎಫ್ ಆರ್ ಎ ಅಡಿಯಲ್ಲಿ ಭೂ ಹಕ್ಕುಗಳಿಗಾಗಿ ಮತ್ತೆ ಅರ್ಜಿ ಸಲ್ಲಿಸಿವೆ. ಬಲವಂತದ ಹೊರಹಾಕುವಿಕೆ ಮತ್ತು ಅನುಸರಣೆಯ ಕೊರತೆಯು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಆಯೋಗ ಹೇಳಿದೆ ಮತ್ತು ಸಂಪೂರ್ಣ ತನಿಖೆ ಮತ್ತು ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.