ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಮಂಗಳೂರಿನ ದೇರಳಕಟ್ಟೆ ಸಮೀಪ ಬಾಲಕಿ ಮತ್ತು ಮಹಿಳೆ ಸಾವು, ಅವಶೇಷಗಳಡಿಯಲ್ಲಿ ಸಿಲುಕಿರುವ ಮೂವರು

ಮಂಗಳೂರು: ರಾಜ್ಯದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಆಸ್ತಿ ಪಾಸ್ತಿ ನಷ್ಟವಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಜಿಲ್ಲೆಯಲ್ಲೇ ಇರುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ್ದಾರೆ.

ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಭೆ ನಡೆಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಂಗಾರು ಮಳೆ ಪರಿಸ್ಥಿತಿ ಬಗ್ಗೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಳೆಗೆ ಕೆಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಆಸ್ತಿ-ಪಾಸ್ತಿ ನಷ್ಟವಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಜಿಲ್ಲೆಯಲ್ಲೇ ಇರುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ್ದಾರೆ. ಕರಾವಳಿಯಲ್ಲಿ ಇಂದು ಶುಕ್ರವಾರದಿಂದ ಮೂರು ದಿನಗಳು ಮಳೆಯ ಜೊತೆಗೆ ಭಾರಿ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕೆಲೆವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳೂರು ಸೇರಿ ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಉಭಯ ಜಿಲ್ಲೆಗಳಲ್ಲಿ ಅಂಗನವಾಡಿಗಳು ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಬಾಲಕಿ ಮತ್ತು ಮಹಿಳೆ ಸಾವು

ಮಂಗಳೂರು ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ದೇರಳಕಟ್ಟೆಯ ಮೊಂಟೆದಪದವು ಎಂಬಲ್ಲಿ ಫಾತಿಮಾ ಎಂಬ 7 ವರ್ಷದ ಬಾಲಕಿ ಹಾಗೂ ಮಹಿಳೆ ವ್ಯಾಪಕ ಮಳೆಯಿಂದ ಭೂಕುಸಿತ ಉಂಟಾಗಿ ಮೃತಪಟ್ಟಿದ್ದಾರೆ. ಜೋಕಟ್ಟೆ ಗ್ರಾಮ ಪಂಚಾಯತ್ ಹತ್ತಿರ ಭೂಕುಸಿತ ಉಂಟಾಗಿದ್ದು ಮನೆಗಳು ಅಪಾಯದ ಸ್ಥಿತಿಯಲ್ಲಿವೆ.

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ದೇರಳಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು ಫಾತಿಮಾ ನಯೀಮ ಎಂಬ ಬಾಲಕಿ ಮೃತಪಟ್ಟಿದೆ. ಮೊದಲಿಗೆ ಗಂಭೀರ ಸ್ಥಿತಿಯಲ್ಲಿದ್ದ ಫಾತಿಮಾ ನಯೀಮಳನ್ನು ರಕ್ಷಣೆ ಮಾಡಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ.

ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಮತ್ತೊಬ್ಬ ಪ್ರೇಮ ಕುಮಾರಿ(58ವ) ಎಂಬ ಮಹಿಳೆ ಮೃತಪಟ್ಟಿದ್ದು, ಸಿಲುಕಿರುವ ಮೂವರನ್ನು ಕಾಪಾಡುವ ಕಾರ್ಯ ಮುಂದುವರಿದಿದೆ.

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಿಷನ್ ಸ್ಟ್ರೀಟ್ ರಸ್ತೆ, ರಾವ್ ಮತ್ತು ರಾವ್ ವೃತ್ತದಲ್ಲಿನ ಅಂಗಡಿಗಳು, ಮನೆಗಳು ಜಲಾವೃತಗೊಂಡಿವೆ.

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳು ಮತ್ತು 1 ರಿಂದ 10 ನೇ ತರಗತಿ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ. ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಅನುಸರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

kiniudupi@rediffmail.com

No Comments

Leave A Comment