ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ; ಗುಡ್ಡ ಕುಸಿದು ಅಂಕೋಲ-ಶಿರಸಿ ರಸ್ತೆ ಬಂದ್

ಶಿರಸಿ:ಮೇ 21: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ 2 ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಲ್ಲಿ ಮಳೆ ಹೆಚ್ಚಾಗುತ್ತಿದೆ. ಇಂದು ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766Eಯಲ್ಲಿ ದೇವಿಮನೆ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿತ್ತು. ಇಲ್ಲಿ ರಸ್ತೆ ಅಗಲೀಕರಣಕ್ಕಾಗಿ ಪಕ್ಕದ ಬಂಡೆಗಲ್ಲುಗಳನ್ನು ಒಡೆಯಲಾಗಿತ್ತು. ಇದ್ದಕ್ಕಿದ್ದಂತೆ ಅಕಾಲಿಕವಾಗಿ ಮಳೆ ಹೆಚ್ಚಾಗಿದ್ದರಿಂದ ಈ ಪ್ರದೇಶದಲ್ಲಿ ಭೂಕುಸಿತವಾಗಿತ್ತು . ಗುಡ್ಡ ಕುಸಿತವಾದ್ದರಿಂದ ಬಂಡೆಗಳು ರಸ್ತೆಯ ಮೇಲೆ ಬಿದ್ದಿತ್ತು. ಕಳೆದ ವರ್ಷವೂ ಈ ಪ್ರದೇಶದಲ್ಲಿ ಕುಸಿತವಾಗಿತ್ತು. ಇದರ ನಡುವೆ ಇಂದು ಮಧ್ಯಾಹ್ನ ಕುಮಟಾ ತಾಲೂಕಿನ ಖೈರೆ ಕ್ರಾಸ್ ಬಳಿ ಗುಡ್ಡ ಕುಸಿತವಾಗಿದೆ.

ಮಿರ್ಜಾನ್ ಮಾರ್ಗವಾಗಿ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿತದ ಘಟನೆ ನಡೆದಿದೆ. ಅಂಕೋಲಾ-ಶಿರಸಿ ಸಂಪರ್ಕಿಸುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದ್ದು, ಈ ಹೆದ್ದಾರಿಯಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಆತಂಕ ಮನೆಮಾಡಿದೆ. ಗುಡ್ಡದ ಆಸುಪಾಸಿನ ನಿವಾಸಿಗಳು ಸ್ಥಳಾಂತರವಾಗಲು ಸೂಚನೆ ನೀಡಲಾಗಿದೆ. ಹೆದ್ದಾರಿ ಕುಸಿದಿದ್ದರೂ ವಾಹನಗಳು ಅಲ್ಲೇ ಸಂಚರಿಸುತ್ತಿವೆ. ಹೀಗಾಗಿ, ಮುಂದಾಗುವ ಅನಾಹುತ ತಪ್ಪಿಸಲು ಸ್ಥಳೀಯರೇ ಕಲ್ಲುಗಳನ್ನು ಅಡ್ಡ ಇಟ್ಟಿದ್ದಾರೆ. ದುರಂತ ಸಂಭವಿಸಬಾರದು ಎಂಬ ಕಾರಣಕ್ಕೆ ಜೀವದ ಹಂಗು ತೊರೆದು ಸ್ಥಳೀಯರೇ ಮುಂದೆ ನಿಂತು ರಸ್ತೆ ಬ್ಲಾಕ್ ಮಾಡಿದ್ದಾರೆ. ಇದಾದ ಬಳಿಕ ಈ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈಗ ಅಧಿಕಾರಿಗಳು ಮಿರ್ಜಾನ್-ಕತಗಾಲ್ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ಸುಮಾರು 18 ಕಿ.ಮೀ. ಸುತ್ತಿಕೊಂಡು ಶಿರಸಿಗೆ ಹೋಗುವ ಸ್ಥಿತಿ ಎದುರಾಗಿದೆ. ಕುಮಟಾ ಮೂಲಕ ಶಿರಸಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಕೋಲದಿಂದ ಕುಮಟಾ ಮೂಲಕ ಶಿರಸಿಗೆ ಪ್ರಯಾಣಿಸಬೇಕಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳದಲ್ಲಿಯೂ ಭಾರಿ ಮಳೆಯಾಗಿದ್ದು, ಘಟ್ಟದ ಮೇಲ್ಬಾಗದ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಇನ್ನೂ 2 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

kiniudupi@rediffmail.com

No Comments

Leave A Comment