ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ಆಂಧ್ರಪ್ರದೇಶದಲ್ಲಿ ಘೋರ ದುರಂತ; ಕಾರಿನೊಳಗೆ ಉಸಿರುಗಟ್ಟಿ ನಾಲ್ವರು ಮಕ್ಕಳ ದಾರುಣ ಸಾವು

ವಿಶಾಖಪಟ್ಟಣಂ: ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಸಣ್ಣಪುಟ್ಟ ಸಂಗತಿಗಳನ್ನೂ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಯಾವುದರಿಂದ ಯಾವಾಗ ಮಕ್ಕಳಿಗೆ ಅಪಾಯವಾಗುತ್ತೆ ಎನ್ನುವುದು ಗೊತ್ತೇ ಆಗುವುದಿಲ್ಲ. ಇಂತಹ ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಆಂಧ್ರಪ್ರದೇಶದಲ್ಲಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ಆಂಧ್ರಪ್ರದೇಶದ ವಿಜಯನಗರಂ (ವಿಜಿಯನಗರಂ) ಗ್ರಾಮೀಣ ಮಂಡಲದ ದ್ವಾರಪುಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಿಲುಕಿ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಎಷ್ಟು ಹೊತ್ತಾದರೂ ಮಕ್ಕಳು ಬಾರದ ಕಾರಣ ಪೋಷಕರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹುಡುಕಿದ ನಂತರ ಕಾರಿನಲ್ಲಿ ಸಿಲುಕಿರುವುದು ಪತ್ತೆಯಾಗಿದೆ.

ಬಳಿಕ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರಗೆ ತಂದಿದ್ದಾರೆ. ಕೂಡಲೇ ವಿಜಯನಗರದ ಸರ್ಕಾರಿ ಜನರಲ್ ಆಸ್ಪತ್ರೆಗೆ (ಜಿಜಿಹೆಚ್) ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.

ಮೃತ ಮಕ್ಕಳನ್ನು ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6) ಮತ್ತು ಕಂಡಿ ಮನಸ್ವಿನಿ (6) ಎಂದು ಗುರುತಿಸಲಾಗಿದೆ, ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರಾಗಿದ್ದು, ನಾಲ್ವರು ಮಕ್ಕಳು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಎರಡು ದಿನಗಳ ಹಿಂದೆ ದ್ವಾರಪುಡಿ ಗ್ರಾಮದ ಮಹಿಳಾ ಮಂಡಳಿ ಕಚೇರಿಯ ಬಳಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರನ್ನು ನಿಲ್ಲಿಸಿದ್ದ. ಕಾರು ಲಾಕ್ ಮಾಡುವುದನ್ನು ಮರೆತಿದ್ದ ಎನ್ನಲಾಗಿದೆ. ಈ ನಡುವೆ ಭಾನುವಾರ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಕಾರಿನೊಳಗೆ ಹೋಗಿದ್ದು, ಕಾರಿನ ಬಾಗಿಲು ಲಾಕಿ ಆಗಿದೆ. ಈ ವೇಳೆ ಮಕ್ಕಳಿಗೆ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಘಟನೆ ಬಳಿಕ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ನಡುವೆ ಸ್ಥಳೀಯ ನಿವಾಸಿಗಳ ಮಾಹಿತಿಯ ಮೇರೆಗೆ, ವಿಜಯನಗರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಕಾರಿನ ಮಾಲೀಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯನಗರ ಜಿಜಿಹೆಚ್‌ಗೆ ರವಾನಿಸಿದ್ದಾರೆ. ಸ್ಥಳೀಯ ಶಾಸಕಿ ಅದಿತಿ ವಿಜಯಲಕ್ಷ್ಮಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಮಕ್ಕಳ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವ ಮತ್ತು ಮೃತ ಮಕ್ಕಳ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ.

kiniudupi@rediffmail.com

No Comments

Leave A Comment