‘ಕೆಂಪುಕೋಟೆ, Taj Mahal… ಅಷ್ಟೇ ಏಕೆ.. ಇಡೀ ಭಾರತವನ್ನೇ Waqf ಮಂಡಳಿಗೆ ಕೊಟ್ಟುಬಿಡಿ’: ತುಂಬಿದ ನ್ಯಾಯಾಲಯದಲ್ಲಿ ವಕೀಲರಿಗೆ ನ್ಯಾಯಾಧೀಶರ ಫುಲ್ ಕ್ಲಾಸ್
ಭೋಪಾಲ್: ಅತ್ತ ಸಂಸತ್ ನಲ್ಲಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸುತ್ತಿರುವಂತೆಯೇ ಇತ್ತ ಮಧ್ಯ ಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ಇದೇ ವಿಚಾರವಾಗಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಹೌದು.. ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರು ವಕೀಲರೊಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ವಕ್ಫ್ ಬೋರ್ಡ್ ಹೆಸರಿನಲ್ಲಿ ಆಸ್ತಿ ಘೋಷಣೆ ಮಾಡಿದ್ದು ಹೇಗೆ ಎಂದು ವಕೀಲರನ್ನು ಪ್ರಶ್ನಿಸಿದ ಅವರು, ವಕೀಲರು ಇದಕ್ಕೆ ಉತ್ತರಿಸಲು ಸಾಧ್ಯವಾಗದಿದ್ದಾಗ ನ್ಯಾಯಾಧೀಶರು ಕೋಪಗೊಂಡರು. ಈ ವೇಳೆ ನಾಳೆ ನೀವು ಕೆಂಪು ಕೋಟೆ, ತಾಜ್ ಮಹಲ್ ಅಷ್ಟೇ ಏಕೆ ಇಡೀ ಭಾರತವನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸುತ್ತೀರಿ ಎಂದು ಕಿಡಿಕಾರಿದರು.
ವಕ್ಫ್ ಆಸ್ತಿಯನ್ನು ಹೇಗೆ ಘೋಷಿಸಲಾಯಿತು ಎಂದು ನನಗೆ ತಿಳಿಸುವಿರಾ? ಅಥವಾ ಅದನ್ನು ಘೋಷಿಸಲಾಗುವುದಿಲ್ಲ ಎಂದು ನೀವು ಭಾವಿಸುತ್ತೀರಾ? ನಾಳೆ ಯಾವುದಾದರೂ ಸಂಸ್ಥೆ ಸರ್ಕಾರಿ ಕಚೇರಿ ಕೂಡ ತಮ್ಮದೇ ಆಸ್ತಿ ಎಂದು ಹೇಳಿದರೆ ಅದು ವಕ್ಫ್ ಆಸ್ತಿಯಾಗಿಬಿಡುತ್ತದೆಯೇ?.. ನನಗೆ ಒಂದು ಸರಳ ಪ್ರಶ್ನೆ ಇದೆ. ಸಹೋದರ, ನೀವು ತಾಜ್ ಮಹಲ್ ತೆಗೆದುಕೊಳ್ಳಿ, ಕೆಂಪು ಕೋಟೆಯನ್ನು ಸಹ ತೆಗೆದುಕೊಳ್ಳಿ, ಯಾರು ನಿರಾಕರಿಸುತ್ತಿದ್ದಾರೆ? ನಿಮಗೆ ಪ್ರೀತಿಯ ಪ್ರಶ್ನೆಗಳು ಅರ್ಥವಾಗುವುದಿಲ್ಲ. ನೀವು ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸು ಬಿಡುತ್ತೀರಾ? ವಿಭಾಗ 5 ರಲ್ಲಿ ಅಧಿಸೂಚನೆ ಇರುತ್ತದೆ. ಒಂದು ಕೆಲಸ ಮಾಡಿ ಇಡೀ ಭಾರತದ ವಕ್ಫ್ ಆಸ್ತಿ ಎಂದು ಘೋಷಿಸಿ ಬಿಡಿ. ಯಾರಿಗೂ ಏನೂ ತಿಳಿದಿಲ್ಲ ಎಂದು ಗರಂ ಆದರು.
ಈ ಕುರಿತು ವಕೀಲರು ಮಾತನಾಡಿ, ಪ್ರಾಚೀನ ಸ್ಮಾರಕಗಳ ಕಾಯಿದೆಯಡಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ ಆಸ್ತಿಯನ್ನು ಸಂರಕ್ಷಿಸಬಹುದು. ಆದರೆ ಮಾಲೀಕತ್ವವು ವಕ್ಫ್ ಮಂಡಳಿಯಲ್ಲೇ ಇರುತ್ತದೆ. ಈ ಆಸ್ತಿಯನ್ನು 1989ರಲ್ಲಿ ವಕ್ಫ್ ಮಂಡಳಿಗೆ ಘೋಷಿಸಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಬಗ್ಗೆ ನ್ಯಾಯಾಧೀಶರು ಮಾತನಾಡಿ, ‘1989 ರಲ್ಲಿ ವಕ್ಫ್ ಮಂಡಳಿಗೆ ಅದರ ಮಾಲೀಕತ್ವವನ್ನು ಹೇಗೆ ಘೋಷಿಸಲಾಯಿತು? ಅದರ ಮಾಲೀಕರು ಯಾರು? ನೀವು ಇದಕ್ಕೆ ಉತ್ತರಿಸಿ. 1989ರ ಅಧಿಸೂಚನೆಗೆ ಮುನ್ನ ಇದು ಯಾರ ಆಸ್ತಿ ಎಂಬುದು ಯಾರಿಗೂ ತಿಳಿದಿಲ್ಲ, ಯಾರಿಗೂ ಏನೂ ತಿಳಿದಿಲ್ಲ. ವಕ್ಫ್ ಆಸ್ತಿ ಎಂದು ಗುರುತಿಸಿಬಿಡಿ ಎಂದು ನ್ಯಾಯಮೂರ್ತಿ ಅಹ್ಲುವಾಲಿಯಾ ಅವರು ಮುಗುಳ್ನಗುತ್ತಾ ಹೇಳಿದರು. ಅಂತೆಯೇ ಅವರು ಹೇಳಲು ಏನೂ ಇಲ್ಲ ಎಂಬುದು ವಕೀಲರ ವಾದದಿಂದ ಸ್ಪಷ್ಟವಾಗಿದೆ. ಅವರ ಬಳಿ ಏನಾದರೂ ಇದ್ದರೆ ಆ ಪ್ರಕರಣಕ್ಕೆ ಬಲ ಬರುತ್ತದೆ ಎಂದು ನ್ಯಾಯಮೂರ್ತಿ ಅಹ್ಲುವಾಲಿಯಾ ಅಭಿಪ್ರಾಯಪಟ್ಟರು.